ಮೈಸೂರು: ಭಾರತ-ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿರುವ ಬೆನ್ನಲ್ಲೇ ದೇಶಾದ್ಯಂತ ಮಾಕ್ ಡ್ರಿಲ್ ನಡೆಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಶನಿವಾರ(ಮೇ.10) ಸಂಜೆ ಅರಮನೆ ನಗರಿ ಮೈಸೂರಿನಲ್ಲಿ ಮಾಕ್ ಡ್ರಿಲ್ ನಡೆಯಲಿದೆ.
ನಗರ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾಕ್ ಡ್ರಿಲ್ ನಡೆಸುವ ಸಂಬಂಧ ಸಿದ್ಧತೆ ನಡೆಸಿದ್ದಾರೆ. ನಗರದ ಅರಮನೆ ಮುಂಭಾಗ ಶನಿವಾರ ಸಂಜೆ 5ರಿಂದ 7 ಗಂಟೆಯವರೆಗೆ ಮಾಕ್ ಡ್ರಿಲ್ ನಡೆಯಲಿದೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಪೊಲೀಸ್ ಇಲಾಖೆ ಅಣಕು ಪ್ರದರ್ಶನ ನಡೆಸಲಿವೆ.
ಸುಮಾರು 2 ತಾಸುಗಳು ಮಾಕ್ ಡ್ರಿಲ್ ನಡೆಯಲಿದ್ದು, ಯುದ್ಧದ ಸಮಯದಲ್ಲಿ ಆಪತ್ತಿನ ಎಚ್ಚರಿಕೆ ಘಂಟೆ, ಅಗ್ನಿಶಾಮಕ ವಾಹನಗಳು, ಆಂಬ್ಯುಲೆನ್ಸ್‌ಗಳ ಸೈರನ್‌ಗಳು ಮೊಳಗುವುದು, ಅಗ್ನಿಶಾಮಕ ಸಿಬ್ಬಂದಿ, ಸಿವಿಲ್ ಡಿಫೆನ್ಸ್, ಗೃಹ ರಕ್ಷಕದಳದ ಸಿಬ್ಬಂದಿ ಹಾಗೂ ಪೊಲೀಸರು ಅಪಾಯದಲ್ಲಿ ಸಿಲುಕಿದ್ದ ನಾಗರಿಕರು, ಗಾಯಾಳುಗಳು ಹಾಗೂ ಕಟ್ಟಡದೊಳಗೆ ಸಿಲುಕಿದವರ ರಕ್ಷಣೆ ಕಾರ್ಯದಲ್ಲಿ ತೊಡಗುವುದನ್ನು ಸಾರ್ವಜನಿಕವಾಗಿ ಪ್ರರ್ದಶನವಾಗಲಿದೆ. ಈ ವೇಳೆ ಯುದ್ಧದ ಸೈರನ್ ಮೊಳಗಲಿದ್ದು, ಕೆಲ ಕಾಲ ವಿದ್ಯುತ್ ದೀಪ ಬಂದ್ ಆಗಲಿದೆ. ಇದು ಕೇವಲ ಅಣಕು ಪ್ರದರ್ಶನವಾಗಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ತಿಳಿಸಿದ್ದಾರೆ.





