Mysore
20
overcast clouds
Light
Dark

ಪರಿಷತ್‌ ಚುನಾವಣೆ: ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಜೆಡಿಎಸ್‌ ಅಭ್ಯರ್ಥಿ ಅಂತಿಮ; ಬಂಡಾಯವಾಗಿ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ

ಮೈಸೂರು: ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ ಪಕ್ಷದ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ನಡುವೆ ಬಿಜೆಪಿ ಟಿಕೆಟ್‌ ಘೋಷಿತ ಅಭ್ಯರ್ಥಿ ಈ.ಸಿ ನಿಂಗರಾಜೇಗೌಡ ಬಂಡಾಯವಾಗಿ ಇಂದು (ಮೇ.೧೫) ನಾಮಪತ್ರ ಸಲ್ಲಿಸಿದ್ದಾರೆ.

ಜೆಡಿಎಸ್‌ ವತಿಯಿಂದ ಮಂಡ್ಯ ಮೂಲದ ವಿವೇಕಾನಂದ ಅವರಿಗೆ ಬಿ ಫಾರಂ ವಿತರಿಸಲಾಗಿದೆ. ಜೆಡಿಎಸ್‌ ವರಿಷ್ಠ ಹೆಚ್.ಡಿ ದೇವೇಗೌಡ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಬಿ. ಫಾರಂ ವಿತರಿಸಿ ಗೆದ್ದು ಬರುವಂತೆ ಆಶೀರ್ವಾದ ಮಾಡಿದ್ದಾರೆ.

ಈ ಮೊದಲು ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಈ.ಸಿ ನಿಂಗರಾಜೇಗೌಡ ಅವರ ಹೆಸರು ಘೋಷಿಸಲಾಗಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಜೆಡಿಎಸ್‌ ನಾಯಕರ ಒತ್ತಾಯದಂತೆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಾಗಿದೆ. ಇದರಿಂದ ಅಸಮಾಧಾನವಾಗೊಂಡಿರುವ ಬಿಜೆಪಿ ಅಭ್ಯರ್ಥಿ ಈ.ಸಿ ನಿಂಗರಾಜೇಗೌಡ ಬಂಡಾಯ ಅಭ್ಯರ್ಥಿಯಾಗಿ ಇಂದು(ಮೇ.೧೫) ಮಧ್ಯಾಹ್ನ ೨ ಗಂಟೆ ವೇಳೆಗೆ ಮೈಸೂರಿನ ಪ್ರಾದೇಶಿಕ ಕಚೇರಿಗೆ ಬೆಂಬಲಿಗರ ಜೊತೆ ಆಗಮಿಸಿ ಬಿ ಫಾರ್ಮ್‌ ಇಲ್ಲದೆ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಬಿಜೆಪಿ ಟಿಕೆಟ್‌ ಘೋಷಿತ ಅಭ್ಯರ್ಥಿ ಡಾ.ಈ.ಸಿ ನಿಂಗರಾಜೇಗೌಡ, ಇಂದು ದಿನ ಚೆನ್ನಾಗಿದೆ ಆಗಾಗಿ ನಾಮಪತ್ರ ಸಲ್ಲಿಸಿದ್ದೇನೆ. ನಾಳೆ ಬೆಳಿಗ್ಗೆ ೧೧ ಗಂಟೆಗೆ ಮೈತ್ರಿ ಅಭ್ಯರ್ಥಿಯಾಗಿ ಬಿ ಫಾರ್ಮ್‌ ಜತೆ ನಾಮಪತ್ರ ಸಲ್ಲಿಸುತ್ತೇನೆ. ಈ ಬಗ್ಗೆ ನನಗೆ ಸಂಪೂರ್ಣ ನಂಬಿಕೆಯಿದೆ ಎಂದು ತಿಳಿಸಿದ್ದಾರೆ.

ಜೆಡಿಎಸ್ ವಿವೇಕಾನಂದಗೆ ಬಿ ಫಾರಂ ನೀಡಿರುವ ವಿಚಾರ ನನಗೆ ಗೊತ್ತಿಲ್ಲ. ಬಿಜೆಪಿ ಏಕಾಏಕಿ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಜೆಡಿಎಸ್ ನಾಯಕರ ಜತೆ ಚರ್ಚಿಸಿ, ಬಿಜೆಪಿ ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹಿಸಿ ನನ್ನ ಹೆಸರು ಅಂತಿಮಗೊಳಿಸಲಾಗಿದೆ. ಒಮ್ಮೆ ಅಭ್ಯರ್ಥಿ ಘೋಷಣೆ ಬಳಿಕ ಬದಲಾವಣೆ ಮಾಡುವ ಪ್ರಶ್ನೆ ಇಲ್ಲ. ರಾಜ್ಯ ಬಿಜೆಪಿ ನಾಯಕರು ಬೆಂಗಳೂರಿಗೆ ಕರೆದಿದ್ದಾರೆ. ಇಂದು ಸಂಜೆ ತೆರಳುತ್ತಿದ್ದೇನೆ. ನಾಳೆ ಬೆಳಗ್ಗೆ ನಾಮಪತ್ರ ಸಲ್ಲಿಕೆಗೂ ಮುನ್ನ ಸಭೆ ನಡೆಸಿ ಬಳಿಕ ನಾಮಪತ್ರ ಸಲ್ಲಿಸುತ್ತೇನೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ತಿಳಿಸಿದ್ದಾರೆ.

ಜೆಡಿಎಸ್‌ಗೂ ಬಂಡಾಯದ ಬಿಸಿ: ದಕ್ಷಿಣ ಶಿಕ್ಷಕರ ಕ್ಷೇತ್ರದ ಟಿಕೆಟ್‌ಗಾಗಿ ವಿವೇಕಾನಂದ ಹಾಗೂ ಕೆ.ಟಿ ಶೀಕಂಠೇಗೌಡ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ, ಅಂತಿಮವಾಗಿ ವಿವೇಕನಂದ ಅವರಿಗೆ ಜೆಡಿಎಸ್‌ ಟಿಕೆಟ್‌ ಘೋಷಿಸಿದೆ. ಆದರಿಂದ್ದ ಅಸಮಾಧಾನಗೊಂಡಿರುವ ಕೆ.ಟಿ ಶ್ರೀಕಂಠೆಗೌಡ ಬಂಡಾಯವಾಗಿ ಸ್ಪರ್ಧಿಸಲು ಬಯಸಿದ್ದಾರೆ. ಈ ಬಗ್ಗೆ ಸೋಶೀಯಲ್‌ ಮಿಡಿಯಾದಲ್ಲಿ ಪ್ರತಿಕ್ರಿಯಿಸಿರುವ ಅವರು, ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ ಬಯಸಿ ಮತ್ತೊಮ್ಮೆ ನಿಮ್ಮ ಬಳಿ ಬರುತ್ತಿದ್ದು, ನನ್ನ ಎಲ್ಲಾ ಶಿಕ್ಷಕ ವೃಂದದವರ ಕುಂದು ಕೊರತೆಗಳನ್ನು ಪರಿಷತ್ತಿನಲ್ಲಿಟ್ಟು ಸಮಸ್ಯೆ ಬರೆಹರಿಸುವ ಪ್ರಯತ್ನ ಮಾಡುತ್ತೇನೆ. ನನ್ನುನ್ನು ಬೆಂಬಲಿಸಿ. ನಾಳೆ(ಮೇ.೧೬) ಬೆಳಿಗ್ಗೆ ೧೧ ಗಂಟೆಗೆ ಮೈಸೂರಿನಲ್ಲಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಹೇಳಿದ್ದಾರೆ.

ಮೈತ್ರಿ ಪಕ್ಷದ ಈ ಬೆಳವಣಿಗೆ ಕಾಂಗ್ರೆಸ್‌ ಪಾಳಯದಲ್ಲಿ ನಗೆಪಾಟಲಿಗೆ ಒಳಗಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿ ಮರಿತಿಬ್ಬೇಗೌಡ ಕಣದಲ್ಲಿದ್ದಾರೆ. ಸತತ ನಾಲ್ಕು ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿರುವ ಮರಿತಿಬ್ಬೇಗೌಡರು ಈಗ ಐದನೇ ಬಾರಿಗೆ ಕಣಕ್ಕಿಳಿದಿದ್ದಾರೆ.