ನಾಗನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗಿ
ಮೈಸೂರು: ಮಕ್ಕಳಿಗೆ ಶಿಕ್ಷಣ, ಬುದ್ದಿವಂತರನ್ನಾಗಿ ಮಾಡುವ ಜತೆಗೆ, ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.
ಮೈಸೂರು ತಾಲ್ಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮಕ್ಕಳು ಬೆಳಿಗ್ಗೆ ಎದ್ದ ತಕ್ಷಣ ಯೋಗ, ಧ್ಯಾನ ಮಾಡಬೇಕು. ನಂತರ,ಶಾಲೆಗೆ ಬಂದಾಗ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಮುಖ್ಯಶಿಕ್ಷಕರು-ಸಹ ಶಿಕ್ಷಕರು ಎನ್ನುವ ಬೇಧ-ಭಾವ ಇಲ್ಲದೆ ಪರಸ್ಪರ ಪ್ರೀತಿಯಿಂದ ಕೆಲಸ ಮಾಡಬೇಕು. ನಾನೇ ಮುಖ್ಯಶಿಕ್ಷಕರು, ಮುಖ್ಯ ಶಿಕ್ಷಕಿ ಎನ್ನುವುದನ್ನು ತಲೆಯಲ್ಲಿ ಇಟ್ಟುಕೊಳ್ಳಬಾರದು. ಎಲ್ಲರೂ ಸರ್ವಜ್ಞರು ಅಲ್ಲ.ಒಂದೊಂದು ವಿಷಯದಲ್ಲಿ ಒಬ್ಬೊಬ್ಬರು ಪರಿಣಿತರಾಗಿರುವ ಕಾರಣ ಅಗತ್ಯಬಿದ್ದರೆ ಮುಖ್ಯಶಿಕ್ಷಕರು ಸಹ ಶಿಕ್ಷಕರ ಸಲಹೆ ಪಡೆಯಬೇಕು ಎಂದು ಹೇಳಿದರು.
ಮಕ್ಕಳಿಗೆ ಶಾರದಾಂಬೆಯ ಆಶೀರ್ವಾದ ಇರಬೇಕು. ಪೋಷಕರು, ತಂದೆ-ತಾಯಿ,ಗುರುಗಳ ಆಶೀರ್ವಾದ ಸದಾ ಮಕ್ಕಳ ಮೇಲೆ ಇರಬೇಕು. ಇಂದಿನ ಮಕ್ಕಳಿಗೆ ನೈತಿಕ, ಮಾನವೀಯ ಶಿಕ್ಷಣ ಕಲಿಸಿ ಸಂಸ್ಕಾರವಂತರಾಗುವಂತೆ ಮಾಡಬೇಕು. ಅದಕ್ಕೆ ತಕ್ಕಂತೆ ಶಿಕ್ಷಕರು ಶಿಕ್ಷಣ ಕಲಿಸಬೇಕು ಎಂದು ಸಲಹೆ ನೀಡಿದರು.
ಮೊದಲನೇ ದಿನದಂದು ಮಕ್ಕಳು ಶಾಲೆಗೆ ಬಂದಿದ್ದಾರೆ. ಕಡ್ಡಾಯವಾಗಿ ಮಕ್ಕಳ ಜೊತೆಗೆ ಪೋಷಕರು ಬರಬೇಕು ಎನ್ನುವಂತೆ ಹೇಳಬೇಕು. ಮೊದಲ ದಿನದ ಪ್ರವೇಶಾತಿಮಾಡುವಾಗ ಪೋಷಕರು ಶಾಲೆಗೆ ಬಂದು ಸೇರಿಸುವಂತೆ ಮಾಡಿದರೆ ಜವಾಬ್ದಾರಿ ಗೊತ್ತಾಗಲಿದೆ. ತಂದೆ-ತಾಯಿ ದೇವರು. ಶಿಕ್ಷಕರು ಮೊದಲ ಗುರುಗಳು. ಎಷ್ಟೇಕೆಲಸ ಇದ್ದರೂ ತಾಯಿ ಪ್ರೀತಿಯಿಂದ ಶಾಲೆಗೆ ಕಳುಹಿಸುತ್ತಾರೆ. ಮಕ್ಕಳು ಶಾಲೆ ಮುಗಿಸಿಮನೆಗೆ ಹೋಗದಿದ್ದರೆ ನಿದ್ರೆ ಮಾಡಲ್ಲ. ಮಕ್ಕಳು ಶಾಲೆಗೆ ಹಾಜರಾಗಿ ಪ್ರವೇಶ ಪಡೆಯದಿದ್ದಲ್ಲಿ ಶಿಕ್ಷಕರು ಮನೆಗೆ ತೆರಳಿ ಪೋಷಕರೊಂದಿಗೆ ಚರ್ಚಿಸಿ ಕರೆತರಬೇಕು. ಸರ್ಕಾರದಿಂದ ಮಕ್ಕಳಿಗೆ ಸಿಗುವ ಸೌಲಭ್ಯಗಳನ್ನು ಹೇಳಬೇಕು. ಸಂಬಳಕ್ಕೆ ಕೆಲಸ ಮಾಡದೆ ಮಾನವೀಯತೆ,ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ನುಡಿದರು.
ಹಲವು ವರ್ಷಗಳ ಹಿಂದೆ ಶಿಕ್ಷಕರಿಗೆ ಮೂಲಸೌಕರ್ಯ ಇರಲಿಲ್ಲ. ಅನೇಕ ಊರುಗಳ ಶಾಲೆಗೆ ಶಿಕ್ಷಕರು ಸೈಕಲ್‌ನಲ್ಲಿ ತೆರಳುತ್ತಿದ್ದರು.ಆದರೆ, ಈಗ ಬಸ್ ಸೌಕರ್ಯ ಇರುವ ಜತೆಗೆ ವೇತನ, ಮತ್ತಿತರ ಅನುಕೂಲಗಳು ಜಾಸ್ತಿ ಇದೆ. ಬೇಕಾದ ಸೌಕರ್ಯವನ್ನು ಸರ್ಕಾರ ನೀಡುತ್ತಿರುವುದರಿಂದ ಶಿಕ್ಷಕರು ಕೂಡ ಬದಲಾಗಬೇಕು ಎಂದರು.
ಮಕ್ಕಳಿಗೆ ಕಲೆ,ನಾಟಕ,ಸಾಹಿತ್ಯವನ್ನು ಕಲಿಸಬೇಕು. ಶಿಕ್ಷಣ ಕಲಿಸುವುದಕ್ಕೆ ಸೀಮಿತವಾಗದೆ ಸಂಸ್ಕಾರಯುತ ಶಿಕ್ಷಣ ಕಲಿಸಬೇಕು. ಎಷ್ಟೇ ದೊಡ್ಡವರಾದರೂ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೇಸ್ಟ್ರು ರಾಚಪ್ಪ ಅವರನ್ನು ನೆನಪಿಸಿಕೊಳ್ಳುತ್ತಾರೆ ಎಂದು ನುಡಿದರು.
ಇಲವಾಲ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಪ್ರವೇಶಕ್ಕೆ ಬೇಡಿಕೆ ಇದೆ. ಇದೇ ರೀತಿ ತಾಲ್ಲೂಕಿನ ಬೇರೆ ಶಾಲೆಗಳಲ್ಲೂ ಬೇಡಿಕೆ ಉಂಟಾಗುವಂತೆ ಮಾಡಬೇಕು. ಶಿಕ್ಷಕರು ಗ್ರಾಮಸ್ಥರ ಸಹಕಾರದೊಂದಿಗೆ ಉತ್ತಮ ಫಲಿತಾಂಶ ತರಬೇಕು. ಮಕ್ಕಳು ಉನ್ನತ ವ್ಯಾಸಂಗಕ್ಕೆ ಹೋಗುವಂತೆ ಮಾಡಬೇಕು. ಕ್ಷೇತ್ರದ ಶಾಸಕನಾದ ಮೇಲೆ ಮೈಸೂರು ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳನ್ನು ಹದ್ದುಬಸ್ತು ಮಾಡಿಸಿ ಖಾತೆ,ದಾಖಲಾತಿ ಮಾಡಿಕೊಡಿಸುವ ಜತೆಗೆ, ಮಕ್ಕಳಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಪೀಠಿಕೆಯನ್ನು ಶಿಕ್ಷಕರು ಓದಿದ ಮೇಲೆ ಮಕ್ಕಳು ಓದಿದ್ದು ತುಂಬಾ ಖುಷಿಯಾಯಿತು. ಮಕ್ಕಳಿಗೆ ಸಂವಿಧಾನ ಪೀಠಿಕೆ ಓದುವ ಕಂಠಪಾಠ ಮಾಡಿರುವುದು ಸಂತಸ. ಮಕ್ಕಳು ನಿತ್ಯ ಪೀಠಿಕೆ ಓದಿದರೆ ಮುಂದೆ ದೊಡ್ಡ ನಾಯಕತ್ವದ ಗುಣ ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಇದಕ್ಕೂ ಮೊದಲು ಶಾಲೆಗೆ ಆಗಮಿಸಿದ ಮಕ್ಕಳಿಗೆ ಸಿಹಿ ಕೊಟ್ಟು ಬರಮಾಡಿಕೊಳ್ಳಲಾಯಿತು. ಜಿಪಂ ಮಾಜಿ ಸದಸ್ಯರಾದ ಜವರೇಗೌಡ, ದಿನೇಶ್, ಗ್ರಾಪಂ ಅಧ್ಯಕ್ಷರಾದ ರಶ್ಮಿ, ಮಾಜಿ ಅಧ್ಯಕ್ಷ ಭಾಸ್ಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಮುಖಂಡರಾದ ಮಾಲೇಗೌಡ, ಮಹದೇವಪ್ಪ, ವಿಜಯಶಂಕರ್, ರಾಜು, ಭವ್ಯ, ಜನಾರ್ಧನ್,ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.





