ಕೆ.ಆರ್ ನಗರ/ಮೈಸೂರು: ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಬಳ್ಳೂರು ಬಳಿಯ ಚಾಮರಾಜ ಎಡದಂಡೆಯ ಬಳಿ ಕೆ.ಆರ್ ನಗರ ಶಾಸಕ ಡಿ.ರವಿಶಂಕರ್ ಪೂಜೆ ಸಲ್ಲಿಸಿ ರೈತನ ಬಾಳು ಹಸನಾಗಿ ಅನ್ನದಾತನಿಗೆ ಶುಭವಾಗಲೆಂದು ಪ್ರಾರ್ಥಿಸಿ ನಾಲೆಗಳಿಗೆ ನೀರು ಹರಿಸಿ ಬಾಗಿನ ಅರ್ಪಿಸಿದರು.
ಬಳಿಕ ಮಾತನಾಡಿದ ಅವರು, ಕಳೆದ ಬಾರಿ ಬರಗಾಲ ಎದುರಿಸಿದ್ದ ಅನ್ನದಾತನಿಗೆ ಈ ಬಾರಿ ವರುಣ ಕೃಪೆ ತೋರಿದ್ದಾನೆ. ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ನದಿ, ಡ್ಯಾಮ್, ಅಣೆಕಟ್ಟೆಗಳು ಸೇರಿದಂತೆ ಕೆರೆಕಟ್ಟೆಗಳು ತುಂಬಿದೆ. ಹೀಗಾಗಿ ಕೆರೆಕಟ್ಟೆಗಳು ಹಾಗೂ ನಾಲೆಗಳಿಗೆ ನೀರು ಹರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಅಂತೆಯೇ ನೀರು ಹರಿಸಲಾಗುತ್ತಿದೆ ಎಂದರು.
ಹವಾಮಾನ ಇಲಾಖೆ ವಾಡಿಕೆಗಿಂತ ಈ ಬಾರಿ ಹೆಚ್ಚು ಮಳೆ ಬೀಳುತ್ತದೆ ಎಂದು ಹೇಳಿದೆ. ರೈತರು ಯಾವುದೇ ಆತಂಕಕ್ಕೆ ಒಳಗಾಗದೆ ಕೃಷಿ ಚಟುವಟಿಕೆ ಹಾಗೂ ಬಿತ್ತನೆ ಕಾರ್ಯ ಆರಂಭಿಸಿ ಎಂದು ಹೇಳಿದರು.
ಮುಂಗಾರು ಹಂಗಾಮಿನ ಕೃಷಿಗೆ ಯಾವುದೇ ರೀತಿಯಲ್ಲಿ ರೈತರಿಗೆ ತೊಂದರೆಯಾಗದಂತೆ ಅಗತ್ಯತೆ ಕೈಗೊಳ್ಳುವಂತೆ ಹಾಗೂ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಹಲವು ತಳಿಯ ಭತ್ತದ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರಗಳನ್ನು ಸಕಾಲದಲ್ಲಿ ರೈತರಿಗೆ ಪೂರೈಸಲು ಇಲಾಖೆಗಳಿಗೆ ಸೂಚಿಸಲಾಗಿದೆ ಎಂದರು.





