ಬೈಲಕುಪ್ಪೆ: ಕಾಣೆಯಾಗಿದ್ದ ಯುವಕ ಕಾವೇರಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ಪಿರಿಯಾಪಟ್ಟಣ ತಾಲ್ಲೂಕಿನ ಮರಡಿಯೂರು ಸಮೀಪದ ಸೂರ್ಯಪುತ್ರ ಲೇಔಟ್ ನಿವಾಸಿ ಪವನ್ (೨೩) ಮೃತಪಟ್ಟ ವ್ಯಕ್ತಿ.
ಈತ ಮೇ ೨೪ರಂದು ತನ್ನ ಸ್ನೇಹಿತ ಕರೆಯುತ್ತಿದ್ದಾನೆ, ಅಲ್ಲಿಗೆ ಹೋಗಿ ಬರುತ್ತೇನೆ ಎಂದು ಮನೆಯಲ್ಲಿ ಹೇಳಿ ಹೋದವನು ಮನೆಗೆ ವಾಪಸ್ ಬಂದಿರಲಿಲ್ಲ. ಈತನ ತಾಯಿ ದಮಯಂತಿ ಅವರು ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪಿಎಸ್‌ಐ ಶಿವಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದರು.
ಶುಕ್ರವಾರ ಕೊಡಗು ಜಿಲ್ಲಾ ಕಣಿವೆ ಸಮೀಪದ ಕಾವೇರಿ ನದಿಯಲ್ಲಿ ಈತನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತನ್ನ ಮಗನ ಸಾವಿನ ಕುರಿತು ಅನುಮಾನವಿದೆ ಎಂದು ತಾಯಿ ದಮಯಂತಿ ಅವರು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಮೋಹನ್ ರಾಜ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.





