Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

25 ಸಾವಿರ ಜಂಬೂ ಸವಾರಿ ಪಾಸ್‌ನಲ್ಲಿ 10 ಸಾವಿರ ಸಚಿವ ಸೋಮಶೇಖರ್‌ ಪಾಲು

ಮೈಸೂರು: ದೇಶ-ವಿದೇಶಗಳ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಮೈಸೂರು ದಸರಾ ಜಂಬೂ ಸವಾರಿಯ ಪಾಸ್‌ ವಿಚಾರದಲ್ಲಿ ದೊಡ್ಡ ಗೋಲ್‌ಮಾಲ್‌ ಆಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೆಲವು ದಿನಗಳ ಹಿಂದಷ್ಟೇ ಗೋಲ್ಡ್‌ ಪಾಸ್‌ ವಿಚಾರದಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದರೆ ಈಗ ಜಂಬೂಸವಾರಿ ವೀಕ್ಷಣೆಯ ಪಾಸ್‌ ವಿತರಣೆಯಲ್ಲಿ ಅಕ್ರಮ ನಡೆಸಿರುವ ಆರೋಪ ಎದುರಾಗಿದೆ.

 

ವಿಜಯ ದಶಮಿ ದಿನದಂದು ನಡೆಯುವ ಜಂಬೂ ಸವಾರಿ ಮೆರವಣಿಗೆಯನ್ನು ಅರಮನೆ ಅಂಗಳದಲ್ಲಿ ಕುಳಿತು ವೀಕ್ಷಿಸಲು ಪ್ರತಿ ವರ್ಷವೂ ಪಾಸ್‌ ವ್ಯವಸ್ಥೆ ಮಾಡಲಾಗುತ್ತದೆ. ಸುಮಾರು 25ಸಾವಿರ ಪಾಸ್‌ ನೀಡಲಾಗುತ್ತದೆ. ಈ ಬಾರಿಯೂ 25ಸಾವಿರ ಪಾಸ್‌ ಮುದ್ರಿಸಲಾಗಿದ್ದು, ಅದರ ಪೈಕಿ 10ಸಾವಿರ ಪಾಸ್‌ಗಳನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಸ್‌.ಟಿ. ಸೋಮಶೇಖರ್‌ ಅವರಿಗಾಗಿ ಮೀಸಲಿಡಲಾಗಿದೆ ಎಂದು ಆರೋಪಿಸಲಾಗಿದೆ.

10ಸಾವಿರ ಪಾಸ್‌ಗಳನ್ನು ತಾನೇ ತೆಗೆದಿಟ್ಟಿರುವ ಸಚಿವರು, ಅದನ್ನು ಬಳಸಿ ತಾವು ಪ್ರತಿನಿಧಿಸುವ ಯಶವಂತಪುರ ಕ್ಷೇತ್ರದ ಮತದಾರರಿಗೆ ದಸರಾ ತೋರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಉಳಿದ ಶಾಸಕರು ತಮಗೆ ಪಾಸ್‌ ಸಿಗುತ್ತಿಲ್ಲ ಎಂದು ಸಿಟ್ಟಿಗೆದ್ದಿದ್ದಾರೆ .ಅದರಲ್ಲೂ ಮುಖ್ಯವಾಗಿ ಬಿಜೆಪಿ ಶಾಸಕರೇ ಸಿಟ್ಟಿಗೆದ್ದಿದ್ದಾರೆ ಎಂದು ಹೇಳಲಾಗಿದೆ.

ಸಚಿವರ ಕಡೆಯಿಂದ ಬಿಜೆಪಿ ಶಾಸಕರಿಗೆ ತಲಾ 100 ಪಾಸ್ ಕಳುಹಿಸಿಕೊಡಲಾಗಿತ್ತು ಆದರೆ, ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್.ವಿಶ್ವನಾಥ್‌ ಅವರಿಗೆ 50 ಪಾಸ್ ಮಾತ್ರ ನೀಡಲಾಗಿದೆ. ಇದನ್ನು ಗಮನಿಸಿದ ಎಚ್‌. ವಿಶ್ವನಾಥ್‌ ಅವರು ಪಾಸ್‌ಗಳನ್ನು, ಅದನ್ನು ಕೊಡಲು ಬಂದ ಸಿಬ್ಬಂದಿಯ ಮೇಲೇ ಎಸದಿದ್ದಾರೆ. ಭಾರಿ ಗಲಾಟೆ ಮಾಡಿದ ಬಳಿಕ ಬಿಜೆಪಿ ಶಾಸಕರಿಗೆ ತಲಾ 500 ಪಾಸ್‌ಗಳನ್ನು ಕೊಡಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ತಲಾ 100 ಪಾಸ್ ಹಂಚಿಕೆ ಮಾಡಲಾಗಿದೆ.

ಜಂಬೂ ಸವಾರಿ ಮತ್ತು ಪಂಜಿನ ಕವಾಯತು ನೋಡಲು ಪಾಸ್‌ಗೆ ಭಾರಿ ಡಿಮ್ಯಾಂಡ್‌ ಇರುತ್ತದೆ. ಸಾರ್ವಜನಿಕರು ಮಾತ್ರವಲ್ಲ ಗಣ್ಯರ ಕಡೆಯಿಂದಲೂ ಭಾರಿ ಬೇಡಿಕೆ ಇರುತ್ತದೆ. ಆದರೆ, ಒಬ್ಬೊಬ್ಬ ರಾಜಕಾರಣಿಗಳು ಇಷ್ಟೊಂದು ಪಾಸ್‌ಗಳನ್ನು ಎತ್ತಿಟ್ಟುಕೊಂಡರೆ ಹೆಚ್ಚಿನವರಿಗೆ ಅನ್ಯಾಯವಾಗುತ್ತದೆ ಎನ್ನುವುದು ಆರೋಪ. ಜನರ ದಸರಾ ಆಗಬೇಕಾದ ದಸರಾ ಮಹೋತ್ಸವ ರಾಜಕಾರಣಿಗಳ ಹಬ್ಬವಾಗುತ್ತದೆ.

ಗೋಲ್ಡ್‌ ಪಾಸ್‌ ವಿವಾದ ಏನು?
ಇದಕ್ಕಿಂತ ಮೊದಲು ಗೋಲ್ಡ್‌ ಪಾಸ್‌ ವಿಚಾರಕ್ಕೆ ವಿವಾದ ಉಂಟಾಗಿತ್ತು. ಮೈಸೂರು ದಸರಾದ ಸರ್ವಾಂಗ ಸೌಂದರ್ಯವನ್ನು ಸವಿಯಲು ಅವಕಾಶವಾಗುವಂತೆ, ಪ್ರೇಕ್ಷಣೀಯ ಸ್ಥಳಗಳಿಗೂ ಪ್ರವೇಶ ದೊರೆಯುವಂತೆ 4999 ರೂ. ಮೌಲ್ಯದ ಗೋಲ್ಡ್‌ ಪಾಸ್‌ ಸಿದ್ಧಪಡಿಸಲಾಗಿದೆ. ಒಟ್ಟು 1000 ಪಾಸ್‌ಗಳನ್ನು ಮಾಡಿ ಅದರಲ್ಲಿ 500ನ್ನು ಆನ್‌ಲೈನ್‌ ಮೂಲಕ, 500 ನ್ನು ಆಫ್‌ ಲೈನ್‌ ಮೂಲಕ ಬಿಡುಗಡೆ ಮಾಡಲಾಗಿತ್ತುದೆನ್ನಲಾಗಿದೆ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ