ಮೈಸೂರು : ಚೀನಾ ವಸ್ತುಗಳನ್ನು ಬಾಯ್ಕಾಟ್ ಮಾಡ್ತೀವಿ ಅನ್ನೋರು ಇದೀಗ ಚೀನಾಕ್ಕೆ ಹೋಗಿ ಶೇಕ್ ಹ್ಯಾಂಡ್ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿಯನ್ನು ಸಚಿವ ಸಂತೋಷ್ ಲಾಡ್ ಟೀಕಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗರಾರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ, ಮುಸಲ್ಮಾನರ ವಿಚಾರ ಮಾತನಾಡುವವರು ಬಿಜೆಪಿ ನಾಯಕರು. ಆಪರೇಷನ್ ಸಿಂಧೂರ್ ಬಗ್ಗೆ ಮಾತನಾಡುವವರು ಪಾಕಿಸ್ತಾನದ ಜತೆ ಈಗ ಕ್ರಿಕೆಟ್ ಪಂದ್ಯ ಆಡುತ್ತಿದ್ದಾರೆ. ಪಾಕಿಸ್ತಾನಕ್ಕೆ ನೀರು ಕೊಡಲ್ಲ ಅಂತಾರೆ. ಚೀನಾ ವಸ್ತುಗಳನ್ನು ಬಾಯ್ಕಾಟ್ ಮಾಡ್ತೀವಿ ಅಂತಾರೆ. ಈಗ ಚೀನಾಕ್ಕೆ ಹೋಗಿ ಶೇಕ್ ಹ್ಯಾಂಡ್ ಮಾಡುತ್ತಾರೆ. ಭಾರತ-ಪಾಕಿಸ್ತಾನ ಯುದ್ಧದ ವೇಳೆ ಪಾಕ್‌ಗೆ ಚೀನಾ ಸಹಾಯ ಮಾಡಿತು ಎಂದು ಪ್ರಧಾನಿ ಮೋದಿ ನಡೆಯನ್ನು ಖಂಡಿಸಿದರು.
ದಸರಾ ಉದ್ಘಾಟಕರ ಪರ-ವಿರೋಧದ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ಬಾನು ಮುಷ್ತಾಕ್ ಅವರನ್ನು ದಸರಾಕ್ಕೆ ಕರೆಯಬಾರದು ಎಂದು ಸಂವಿಧಾನದಲ್ಲಿ ಇಲ್ಲ. ಬಿಜೆಪಿಯವರು ರಾಮಮಂದಿರ ಪ್ರಾಂರಂಭೋತ್ಸವ ಮಾಡಿದಾಗ ಪೂಜೆ ಮಾಡಿದ್ದು ಯಾರು?ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲವಾ, ಬ್ರಾಹ್ಮಣ ವ್ಯವಸ್ಥೆ ಬಿಟ್ಟು ನಾವೇ ಪೂಜೆ ಮಾಡಲು ಆಗುತ್ತದೆಯೇ? ನಾನು ಕೂಡ ಹಿಂದು. ನಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಕಾರ್ಯಕ್ರಮದಲ್ಲೂ ಪೂಜೆ ಮಾಡುವವರು ಯಾರು? ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
“ಗಾಂಧೀಜಿ ಕೊಂದಿದ್ದು ಆರ್‌ಎಸ್‌ಎಸ್ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಸುಳ್ಳು ಹೇಳುವುದಿಲ್ಲ. ಗಾಂಧೀಜಿ ಕೊಂದಿದ್ದು ಯಾರು ಅಂತ ಇಡೀ ಜಗತ್ತಿಗೆ ಗೊತ್ತಿದೆ ಎಂದು ಸಿಎಂ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಬಿಜೆಪಿ-ಜಾ.ದಳದ ನಾಯಕರಿಂದ ಧರ್ಮಸ್ಥಳ ಚಲೋ ವಿಚಾರವಾಗಿ ಮಾತನಾಡಿ, ಎಸ್‌ಐಟಿ ತನಿಖೆ ವೇಳೆ ಮೃತ ದೇಹಗಳು ಸಿಗದಿದ್ದಕ್ಕೆ ರಾಜಕೀಯ ಲಾಭ ಪಡೆಯಲು ಬಿಜೆಪಿಯವರು ಮುಂದಾಗಿದ್ದಾರೆ. ಧರ್ಮಸ್ಥಳದ ಮೇಲೆ ಒಂದು ಕಳಂಕ ಇತ್ತು. ಕೆಲವರು ಧರ್ಮಸ್ಥಳದ ಮೇಲೆ ಆರೋಪ ಮಾಡುತ್ತಿದ್ದರು. ಎಸ್‌ಐಟಿ ತನಿಖೆ ಮೂಲಕ ಧರ್ಮಸ್ಥಳದ ಪ್ರಕರಣದ ಸತ್ಯಾಂಶವನ್ನು ರಾಜ್ಯಕ್ಕೆ ತಿಳಿಸಲಾಗುತ್ತಿದೆ ಎಂದರು.





