ಮೈಸೂರು : ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಭಾನುವಾರ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಭಾನುವಾರ ಮಧ್ಯಾಹ್ನದಿಂದ ಸಂಜೆ ತನಕ ನೂರಾರು ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಕೇಳಿದರು. ಎಚ್.ಡಿ.ಕೋಟೆ ತಾಲ್ಲೂಕಿನ ಬೇಲದಕುಪ್ಪೆ ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು ಆಗಮಿಸಿ ಜಾತ್ರೆಗೆ ಆಗಮಿಸುವಂತೆ ಮನವಿ ಸಲ್ಲಿಸುವ ಜತೆಗೆ, ಹಲವಾರು ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು. ಕಂಚುಮಳ್ಳಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಕಾಮಗಾರಿಗೆ 50 ಲಕ್ಷ ರೂಪಾಯಿ ನೀಡಿದ್ದು,ಕಾಮಗಾರಿ ಪೂರ್ಣವಾಗಿಲ್ಲ. ಹಾಗಾಗಿ,ಹೆಚ್ಚುವರಿ ಅನುದಾನ ನೀಡುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದ ಸಚಿವರು ಮುಂದಿನ ದಿನಗಳಲ್ಲಿ ಭವನ ನಿರ್ಮಾಣಕ್ಕೆ ಆಗುವ ಅಂದಾಜು ಪಟ್ಟಿಯನ್ನು ತಯಾರಿಸಿ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದು ಹೇಳಿದರು.
ಎಚ್.ಡಿ.ಕೋಟೆಯ ಜೀತ ವಿಮುಕ್ತ ಕಾರ್ಮಿಕರ ಸಂಘಟನೆಯ ಪದಾಧಿಕಾರಿಗಳು ಸಚಿವರಿಗೆ ಕಾರ್ಮಿಕರ ಸಮಸ್ಯೆಗಳನ್ನು ವಿವರಿಸಿದರು. ತಾಲ್ಲೂಕಿನಲ್ಲಿರುವ ಕಾರ್ಮಿಕರು, ಸರ್ಕಾರದಿಂದ ಸಿಗಬೇಕಾದ ಸೌಲಭ್ಯ, ಜಮೀನು ಮಂಜೂರಾತಿಯಲ್ಲಿ ವಿಳಂಬ ಸೇರಿದಂತೆ ಮತ್ತಿತರ ಅಂಶಗಳನ್ನು ಹೇಳಿದರು.
ಇದನ್ನು ಪರಿಗಣಿಸಿದ ಡಾ.ಮಹದೇವಪ್ಪ,ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ನಂಜನಗೂಡು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶರಾಜು ನೇತೃತ್ವದ ತಂಡ ಆಗಮಿಸಿ ಸಚಿವರೊಂದಿಗೆ ನಾನಾ ವಿಚಾರಗಳನ್ನು ಚರ್ಚಿಸಿದರಲ್ಲದೆ, ಖಾಸಗಿ ಟ್ರಸ್ಟ್‌ಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು. ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ಧಾರ್ಥ ಅವರು ಸೋಸಲೆ ಭಾಗಕ್ಕೆ ಆಗಬೇಕಿರುವ ಕೆಲಸಗಳ ಬಗ್ಗೆ ಚರ್ಚಿಸಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಿಕ್ಕಬಳ್ಳಾಪುರ ಡಿಪೋದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರೊಬ್ಬರು ಪೋಷಕರ ಅನಾರೋಗ್ಯದ ಕಾರಣಕ್ಕಾಗಿ ಮೈಸೂರು ಜಿಲ್ಲೆಗೆ ವರ್ಗಾಯಿಸುವಂತೆ ಮನವಿ ಮಾಡಿದರು. ಈ ಬಗ್ಗೆ ದೂರವಾಣಿ ಮೂಲಕ ಕೆಎಸ್‌ಆರ್‌ಟಿಸಿ ಎಂಡಿ ಜತೆಗೆ ಚರ್ಚಿಸಿದ ಸಚಿವರು,ಮಾನವೀಯತೆ ಆಧಾರದ ಮೇಲೆ ನೌಕರನ ಅರ್ಜಿಯನ್ನು ಪರಿಗಣಿಸಿ ವರ್ಗಾಯಿಸುವಂತೆ ಹೇಳಿದರು.





