ಮೈಸೂರು: ಹನಿಟ್ರ್ಯಾಪ್ ಕೆಲಸ ಮಾಡುವವರಿಗೆ ಉಗ್ರ ಶಿಕ್ಷೆ ಆಗುವ ನಿಟ್ಟಿನಲ್ಲಿ ಹೊಸ ಕಾಯ್ದೆ ತರಬೇಕು ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಆಗ್ರಹಿಸಿದರು.
ರಾಜ್ಯದಲ್ಲಿ ಸಚಿವರ ಹನಿಟ್ರ್ಯಾಪ್ ವಿಚಾರ ಕುರಿತು ಶನಿವಾರ ಮೈಸೂರಿನಲ್ಲಿ ಪ್ರತಿಕ್ರಿಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ಎಂಬುದು ಪಿತೂರಿ. ಈ ಹಿಂದಿನಿಂದಲೂ ಇದು ನಡೆಯುತ್ತಾ ಬಂದಿದೆ. ಇದಕ್ಕೆ ಸಂಬಂಧಿಸಿದ ಕಾಯ್ದೆ ತರಬೇಕು. ದುರುದ್ದೇಶದ ಈ ಪಿತೂರಿ ಮಾಡುವ ಗುಂಪುಗಳನ್ನು ಮಟ್ಟ ಹಾಕಬೇಕು. ಖಾಸಗಿತನದ ಗೌಪ್ಯತೆ ಧಕ್ಕೆ ತರುತ್ತಿದ್ದಾರೆ. ಇಂತಹ ಕೆಲಸ ಮಾಡುವವರಿಗೆ ಉಗ್ರ ಶಿಕ್ಷೆ ಆಗುವ ನಿಟ್ಟಿನಲ್ಲಿ ಹೊಸ ಕಾಯ್ದೆ ತರಬೇಕು ಎಂದು ಒತ್ತಾಯಿಸಿದರು.
ಹನಿಟ್ರ್ಯಾಪ್ ಸ್ವಪಕ್ಷದವರೇ ಮಾಡಿದ್ದಾರೆ ಎಂದು ಸಚಿವ ರಾಜಣ್ಣ ಯಾರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ ಗೊತ್ತಿಲ್ಲ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಲಿ. ತನಿಖೆಯಲ್ಲಿ ಮಾತ್ರ ಯಾರು ಮಾಡಿದರು, ಏನು ಮಾಡಿದರು ಎಂಬುದು ಗೊತ್ತಾಗುತ್ತದೆ. ಯಾರಾದರೂ ಸರಿ ಸತ್ಯ ಹೊರಗಡೆ ಬರಲಿ. ಸುಮ್ಮನೆ ಅವರು, ಇವರು ಅನ್ನೋದು ಸರಿಯಲ್ಲ. ಯಾರೇ ಮಾಡಿದರೂ ಕ್ರಮ ತೆಗೆದುಕೊಳ್ಳಲಿ. ಸುಮ್ಮನೆ ಊಹಾಪೋಹದ ಮಾತು ಬೇಡ ಎಂದು ಹೇಳಿದರು.
ನಾನು ಎಲ್ಲರಿಗೂ ಹಲೋ ಎನ್ನುತ್ತೇನೆ. ಎಲ್ಲರೂ ನನಗೆ ಪ್ರತಿಕ್ರಿಯೆ ಕೊಡುತ್ತಾರೆ. ಅದರಿಂದಲೇ ಹನಿಟ್ರ್ಯಾಪ್ ಅನ್ನೋದು ಹೇಗೆ. ನನಗೆ ಅಂತಹ ಯಾವ ವಿಚಾರಗಳು ಗೊತ್ತಾಗುವುದಿಲ್ಲ. ನನ್ನನ್ನು ತುಳಿಯುವ ಪ್ರಯತ್ನ ಯಾರು ಮಾಡುತ್ತಾರೋ, ಮಾಡಿದಾರೋ ಅದು ನನಗೆ ಗೊತ್ತಿಲ್ಲ. ಆದರೆ ನಾನಂತೂ ಸದೃಢವಾಗಿ ಕುಳಿತ್ತಿದ್ದೇನೆ. ಹನಿಟ್ರ್ಯಾಪ್ ವಿಚಾರದಲ್ಲಿ ರಾಜಣ್ಣ ಜೊತೆ ಪ್ರತ್ಯೇಕ ಸಭೆ ನಡೆಸುವ ಅಗತ್ಯವೇನು ಇಲ್ಲ. ಏಕಂದರೆ ಈ ವಿಚಾರ ಈಗಾಗಲೇ ತೀರ್ಮಾನ ಆಗಿದೆ. ಉನ್ನತ ಮಟ್ಟದ ತನಿಖೆ ನಡೆಯಲಿ ಎಂದು ಹೇಳಿದರು.
ಹಲೋ ಅಂತ ಇಲ್ಲಿ ಹೇಳಿದ್ರೆ, ಅಲ್ಲೂ ಹಲೋ ಅಂತಾರೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ . ಸಿಎಂ ಸಿದ್ದರಾಮಯ್ಯ ಪರ ಇದ್ದೋರನ್ನ ಟಾರ್ಗೆಟ್ ಮಾಡ್ತಿದ್ದಾರೆಯೇ ಎಂದು ನನಗೆ ಅನಿಸಲ್ಲ. ಆದರೆ ಮಾಡುತ್ತಿರಬಹುದು. ನಾನು ಕೂಡ ಸಿಕ್ಕ ಸಿಕ್ಕವರಿಗೇ ಹಾಯ್, ಹಲೋ ಹೇಳಿದ್ದೀನಿ ಎಂದರು.
ನಾನು ನನ್ನ ರಾಜಕೀಯ ಇತಿಹಾಸದಲ್ಲಿ ಈ ರೀತಿ ಹನಿಟ್ರ್ಯಾಪ್‌ಗಳನ್ನ ನೋಡಿಲ್ಲ. ರಾಜ್ಯದ ರಾಜಕೀಯ ನೈತಿಕ ಅಧಃಪತನದತ್ತ ತಲುಪಿದೆ ಎಂದು ಬೇಸರ ವ್ಯಕ್ತಪಡಿಸಿದರು.





