Mysore
15
overcast clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಪುತ್ರನ ಪರ ಸಚಿವ ಹೆಚ್‌.ಸಿ.ಮಹದೇವಪ್ಪ ಮತಯಾಚನೆ !

ತಲಕಾಡು : ಪ್ರಜಾಪ್ರಭುತ್ವ ವ್ಯವಸ್ಥೆಗೆ ವ್ಯಕ್ತಿಪೂಜೆ ಮಾರಕ, ವ್ಯಕ್ತಿ ಪೂಜೆಯಿಂದ ಸರ್ವಾಧಿಕಾರ ಬೆಳೆಯಲಿದೆ, ಸರ್ವಾಧಿಕಾರ ಪ್ರಜಾ ಪ್ರಭುತ್ವ ವ್ಯವಸ್ಥೆ ನಾಶಮಾಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಕಳವಳ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪುತ್ರ ಸುನೀಲ್ ಬೋಸ್ ಪರ ಕ್ಷೇತ್ರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿರುವ ಡಾ.ಹೆಚ್ ಸಿ. ಮಹದೇವಪ್ಪ ಭಾನುವಾರ ತಲಕಾಡು ಹೋಬಳಿ ಕೈ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಜನರಿಂದ ಜನರಿಗೋಸ್ಕರ :  ಪ್ರಜಾಪ್ರಭುತ್ವ ವ್ಯವಸ್ಥೆ ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಆಡಳಿತ ವ್ಯವಸ್ಥೆ, ಸಂವಿಧಾನ ಸರ್ವರಿಗೂ ಮುಕ್ತ ಸ್ವಾತಂತ್ರ್ಯ ನೀಡಿದೆ, ಸಂವಿಧಾನದಲ್ಲಿ ಶ್ರೇಷ್ಠ ಕನಿಷ್ಠ ‌ಧರ್ಮ ಎಂಬುದಿಲ್ಲ. ಬಡಜನತೆಯ ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತಿರುವ ಬೆಲೆ ಏರಿಕೆ ಬಗ್ಗೆ ಮಾತನಾಡದ ಬಿಜೆಪಿಯವರು, ಜನತೆಯ ಬಾವನಾತ್ಮಕ ಧರ್ಮ ದೇವರುಗಳ ಬಗ್ಗೆ ಪ್ರಚೋದಿಸಿ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು. ಈ ಬಾರಿಯ ಚುನಾವಣೆ ಸಂವಿಧಾನ ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದು ಸಚಿವರು ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದರು.

ಬಂಡವಾಳ ಶಾಹಿಗಳ ಪರ: ರಾಜ್ಯದ ಬಡ ಮಹಿಳೆಯರ ಬದುಕಿಗೆ ನೆರವಾಗಲು ಮಾಹೆಯಾನ 4ರಿಂದ 5ಸಾವಿರ ವರಮಾನವನ್ನು ಸರ್ಕಾರ ಗ್ಯಾರಂಟಿ ರೂಪದಲ್ಲಿ ಒದಗಿಸಿಕೊಟ್ಟಿದೆ. ಇದರಿಂದ ರಾಜ್ಯದ ಹಣಕಾಸು ವ್ಯವಸ್ಥೆ ದಿವಾಳಿಯಾಗುತ್ತದೆ ಎಂದು ಬೊಬ್ಬೆ ಹೊಡೆಯುವ ಬಿಜೆಪಿಗರು,
ಬಂಡವಾಳ ಶಾಹಿಗಳ ಪರವಾಗಿದ್ದು, ಬಡಜನರ ಪರವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದಾತದ ಬಗ್ಗೆ ಸ್ಪಷ್ಟತೆ ಇಲ್ಲದವರು: ಮಳೆಬೆಳೆ ಇಲ್ಲದೆ ರಾಜ್ಯದ ಜನತೆ ಸಂಕಷ್ಟದಲ್ಲಿದ್ದು ಬರಪರಿಹಾರ ಕೊಡಿ ಎಂದು ಕೇಂದ್ರಕ್ಕೆ ಕೇಳಿದರೆ ದಂಬ್ಡಿ ಕಾಸು ಕೊಟ್ಟಿಲ್ಲ ಎಂದು ಟೀಕಾ ಪ್ರಹಾರ ನಡೆಸಿದ ಸಚಿವರು, ಸಭೆಯಲ್ಲಿ ಜೆಡಿಎಸ್ ಪಕ್ಷದ ಧೋರಣೆ ಬಗ್ಗೆಯೂ ತರಾಟೆಗೆ ತೆಗೆದುಕೊಂಡರು. ಬಿಜೆಪಿ ಕಾಂಗ್ರೆಸ್ ಜತೆ ಸಮಾನ ಅಂತರ ಕಾಪಾಡಿಕೊಳ್ಳುತ್ತೇವೆ ಎಂದು ಹೇಳಿದವರು, ಬಿಜೆಪಿ, ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದರು. ರಾಜಕೀಯ ಪಕ್ಷದ ತತ್ವ ಸಿದ್ದಾಂತ ಸ್ಪಷ್ಟತೆಯೇ ಇಲ್ಲದವರಿಂದ, ಸಂವಿಧಾನದ ಆಶಯಗಳ ಸಮರ್ಪಕ ಜಾರಿ ನಿರೀಕ್ಷಿಸುವುದಾದರು ಹೇಗೆಂಬ..? ಪ್ರಶ್ನೆ ಮುಂದಿಟ್ಟರು.

ತಾ.ಪಂ.ಮಾಜಿ ಸದಸ್ಯ ಕುಕ್ಕೂರ್ ಗಣೇಶ್ ಮಾತನಾಡಿ, ಚಾಮರಾಜನಗರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಯುವ ಮುಖಂಡ ಸುನೀಲ್ ಬೋಸ್ ಅವರನ್ನು, ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರಲು ಪಕ್ಷದ ಕಾರ್ಯಕರ್ತರು ಶಕ್ತಿಮೀರಿ ಶ್ರಮಿಸುವಂತೆ ಕರೆ ನೀಡಿದರು. ತಾ.ಪಂ ಮಾಜಿ ಉಪಾಧ್ಯಕ್ಷ ಕುಕ್ಕೂರು ಪ್ರಸನ್ನ ಮಾತನಾಡಿ ಸರ್ಕಾರದಿಂದ ತಲಕಾಡಿಗೆ ನೂತನ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜು ಮಂಜೂರು ಮಾಡಿಸಿ ಕೊಡುವಂತೆ ಸಚಿವರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಭೆಯಲ್ಲಿ ಚಿತ್ರನಿರ್ದೇಶಕ, ಎಸ್.ನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೂಗೂರು ಎಂ.ಡಿ.ಬಸವರಾಜು, ಜಿ.ಪಂ. ಮಾಜಿ ಸದಸ್ಯ ಟಿ.ಹೆಚ್.ಮಂಜುನಾಥ್, ತಾ.ಪಂ.ಮಾಜಿ ಸದಸ್ಯ ನರಸಿಂಹಮಾದನಾಯಕ, ಗ್ರಾ.ಪಂ.ಮಾಜಿ ಅಧ್ಯಕ್ಷ ಮಲ್ಲಾಣಿ, ಜಿ.ಕೆಂಪಯ್ಯ, ಬೆಟ್ಟಹಳ್ಳಿ ನಾಗರಾಜು, ಕೆಪಿಸಿಸಿ ಸದಸ್ಯ ಸುಂದರನಾಯಕ, ಯಜಮಾನ್ ಜೆ. ರಾಜು, ಹೋಬಳಿ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಮ್ಮ,ಅಶೋಕ್ ಪಟೇಲ್, ಬುಲೆಟ್ ಶ್ರೀನಿವಾಸ ಕುಕ್ಕೂರ್ ಗಣೇಶ್, ಪ್ರಸನ್ನ, ಹೆಮ್ಮಿಗೆ‌ ಶೇಷಾದ್ರಿ ಪಾಪಣ್ಣ, ಕಾವೇರಿಪುರ ಶಾಂತರಾಜು, ಶ್ರೀಕಂಠಪ್ಪ, ಟಿ.ಬೆಟ್ಟಹಳ್ಳಿ ಕೋಕಿಲಾ,ತಾ.ಪಂ.ಮಾಜಿ ಸದಸ್ಯೆ ಮಲ್ಲಾಜಮ್ಮ ಹೆಚ್.ರಾಜು, ಕಾಳಿಹುಂಡಿ ಮಹೇಂದ್ರ ಇತರೆ ಪ್ರಮುಖರು ಪಾಲ್ಗೊಂಡಿದ್ದರು.

Tags:
error: Content is protected !!