ಮೈಸೂರು : ನಗರದ ಹೃದಯ ಭಾಗದ ಕೆ.ಆರ್ ವೃತ್ತದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯ ಮೇಲೆ ಮಾನಸಿಕ ಅಸ್ವಸ್ಥನೋರ್ವ ಕುಳಿತು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದ ಪ್ರಸಂಗ ಶುಕ್ರವಾರ ನಡೆದಿದೆ.
ಇಂದು ಸಂಜೆ 4 ಗಂಟೆಯ ವೇಳೆಗೆ ನಾಲ್ವಡಿಯವರ ಪ್ರತಿಮೆಯ ತಲೆಯ ಮೇಲೆ ಏರಿ ಸುಮಾರು ಅರ್ಧ ಗಂಟೆಗಳ ಕಾಲ ಕುಳಿತಿದ್ದ ಮಾನಸಿಕ ಅಸ್ವಸ್ಥನನ್ನು ಸಾರ್ವಜನಿಕರು ಕಂಡು ಅಸಮಾಧಾನಗೊಂಡಿದ್ದಾರೆ. ಈ ವೇಳೆ ಕೂಡಲೇ ಸಮೀಪದ ದೇವರಾಜ ಪೊಲೀಸ್ ಠಾಣೆಗೆ ಸಾರ್ವಜನಿಕರು ಕರೆ ಮಾಡಿ ದೂರು ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರನ್ನು ಕಂಡು ಮಾನಸಿಕ ಅಸ್ವಸ್ಥ ಸ್ಥಳದಿಂದ ಓಡಿ ಹೋಗಿದ್ದಾನೆ.
ಸದ್ಯ ಪ್ರತಿಮೆಯ ತಲೆಯ ಮೇಲೇರಿ ಕುಳಿತಿದ್ದ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿದೆ. ಆದರೆ ಪ್ರತಿಮೆ ಮೇಲೆ ಕುಳಿತಿದ್ದ ಮಾನಸಿಕ ಅಸ್ವಸ್ತ ಯಾರೆಂದು ತಿಳಿದು ಬಂದಿಲ್ಲ.





