ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಶ್ವವಿಖ್ಯಾತ ಮೈಸೂರು ಅರಮನೆ ಮುಂಭಾಗದಲ್ಲಿ ನಡೆದಿದೆ.
ಇಂದು (ಡಿಸೆಂಬರ್ 25) ರಾತ್ರಿ ಅರಮನೆಯ ಜಯ ಮಾರ್ತಾಂಡ ಗೇಟ್ ಮುಂಭಾಗ ಬಲೂನ್ಗೆ ಗ್ಯಾಸ್ ತುಂಬಿಸುವಾಗ ಸ್ಫೋಟವಾಗಿದ್ದು, ಇದರ ತೀವ್ರತೆಗೆ ಸಿಲಿಂಡರ್ ಛಿದ್ರ ಛೀದ್ರವಾಗಿದೆ. ಸ್ಥಳಕ್ಕೆ ಕೆ.ಆರ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಈ ಸ್ಫೋಟಕ್ಕೆ ಸಾಂಸ್ಕೃತಿಕ ನಗರಿ ಜನ ಬೆಚ್ಚಿಬಿದ್ದಿದ್ದಾರೆ.
ಬ್ಲಾಸ್ಟ್ ತೀವ್ರತೆಗೆ ಇಬ್ಬರ ದೇಹ ಛಿದ್ರ ಛಿದ್ರಗೊಂಡಿದೆ. ಇನ್ನು ಘಟನೆಯಲ್ಲಿ ನಾಲ್ವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಬಲೂನ್ ಗೆ ಗ್ಯಾಸ್ ತುಂಬುವ ಹಿಲಿಯಂ ಗ್ಯಾಸ್ ಸಿಲಿಂಡರ್ ಸ್ಪೋಟವಾಗಿದ್ದು, ಬಲೂನ್ ಮಾರುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಬೆಂಗಳೂರು ಮೂಲದ ಲಕ್ಷ್ಮಿ ಸ್ಥಿತಿ ಗಂಭೀರವಾಗಿದೆ. ಇನ್ನು ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಮಂಜುಳಾ, ಕೋಲ್ಕತ್ತಾ ಮೂಲದ ಶಾಹಿನಾ ಶಬ್ಬಿರ್ , ರಾಣೆಬೆನ್ನೂರು ಮೂಲದ ಕೊಟ್ರೇಶ್ ಎಂಬುವರಿಗೂ ಗಾಯಗಳಾಗಿದ್ದು, ಸದ್ಯ ಇವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.





