Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಗುಣಮಟ್ಟದ ಉತ್ಪಾದನೆಯಿಂದ ಮಾತ್ರ ಮಾರುಕಟ್ಟೆ ಉಳಿಯಲು ಸಾಧ್ಯ: ನಾಗಮಣಿ

ಮೈಸೂರು: ಜನರು ಮಾರುಕಟ್ಟೆಯಲ್ಲಿ ಆರೋಗ್ಯಕರ ಉತ್ಪನ್ನವನ್ನು ಖರೀದಿಸಲು ಬಯಸುತ್ತಾರೆ. ಹಾಗಾಗಿ ಉತ್ಪಾದಕರು ಅಥವಾ ಉತ್ಪಾದಕ ಸಂಸ್ಥೆಗಳು ಉತ್ಪನ್ನಗಳನ್ನು ತಯಾರಿಸುವಾಗ ಗುಣಮಟ್ಟವನ್ನು ಕಾಯ್ದುಕೊಂಡರೆ ಮಾರುಕಟ್ಟೆಯಲ್ಲಿ ದೀರ್ಘಾವಧಿಯವರೆಗೆ ಉಳಿಯಬಹುದು ಎಂದು ಬಿ.ಐ. ಎಸ್ ನ ವಿಜ್ಞಾನಿಯಾದ ನಾಗಮಣಿಯವರು ಹೇಳಿದರು.

ಇಂದು ಭಾರತೀಯ ಮಾನಕ ಬ್ಯುರೋ ಹಾಗೂ ಕಾಸಿಯ ಸಂಸ್ಥೆಯ ವತಿಯಿಂದ ಮೈಸೂರಿನ ಪೈ ವಿಸ್ತಾ ಹೋಟೆಲಿನಲ್ಲಿ ಆಯೋಜಿಸಲಾಗಿದ್ದ, ಉತ್ತಮ ಪ್ರಪಂಚಕ್ಕಾಗಿ ದೂರ ದೃಷ್ಟಿಯ ಸಿದ್ಧತೆ- ಎಸ್ ಡಿಜಿ9 ” ಕೃತಕ ಬುದ್ಧಿಮತ್ತೆ ಯು ಮೂಲಕ ಉದ್ಯಮ, ನಾವೀನ್ಯತೆ ಮತ್ತು ಮೂಲ ಸೌಕರ್ಯವನ್ನು ಸಾಧಿಸುವುದು ಎಂಬ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಸ್ಥಿರ ಅಭಿವೃದ್ಧಿ ಎನ್ನುವುದು ಉತ್ಪನ್ನದ ಗುಣಮಟ್ಟವನ್ನು ಒಳಗೊಂಡಿದೆ. ಯಾವುದೇ ಒಂದು ಸಂಸ್ಥೆಯು ತನ್ನ ಗ್ರಾಹಕರಿಗಾಗಿ ಉತ್ತಮ ಗುಣಮಟ್ಟವುಳ್ಳಂತಹ ಪದಾರ್ಥಗಳನ್ನು ಉತ್ಪಾದಿಸಬೇಕು. ಆಗ ಮಾತ್ರವೇ ಆ ಸಂಸ್ಥೆಯು ಮಾರುಕಟ್ಟೆಯಲ್ಲಿ ಉಳಿಯಲು ಸಾಧ್ಯ ಎಂದು ಹೇಳಿದರು.

 

ಪ್ರಪಂಚದಲ್ಲಿಯೇ ಭಾರತವು ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ಇಲ್ಲಿ ಯಾವುದೇ ಸಂಸ್ಥೆ ಅಥವಾ ಕೈಗಾರಿಕೆಯನ್ನು ಪ್ರಾರಂಭಿಸಿದರು ಅದು ಪ್ರತ್ಯೇಕ ಗ್ರಾಹಕಾರನ್ನು ಪಡೆದುಕೊಳ್ಳುತ್ತದೆ. ಹಾಗಾಗಿಯೇ ಇಂದು ವಿದೇಶಿ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತವೆ. ಹೀಗೆಂದ ಮಾತ್ರಕ್ಕೆ ಹೂಡಿಕೆ ಮಾಡಿದ ಎಲ್ಲಾ ಕಂಪನಿಗಳು ವ್ಯಾಪಾರದಲ್ಲಿ ಯಶಸ್ವಿ ಪಡೆಯುವುದಿಲ್ಲ. ಯಾವ ಕಂಪನಿಯೂ ಉತ್ತಮ ಗುಣಮಟ್ಟದ ಉತ್ಪನ್ನವನ್ನು ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ನೀಡುತ್ತದೆಯೋ ಅಂತಹ ಸಂಸ್ಥೆ ಯಶಸ್ವಿ ಪಡೆಯುತ್ತವೆ. ಇಂತಹ ಸಂಸ್ಥೆಗಳು ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಂದು ಪ್ರಪಂಚದಾದ್ಯಂತ ಅತಿ ಹೆಚ್ಚು ಮಾರಾಟವಾಗುತ್ತಿರುವ ಬ್ರಾಂಡ್ ಗಳು ತಮ್ಮ ಉತ್ಪನ್ನದ ಗುಣಮಟ್ಟವನ್ನು ಕಾಯ್ದಿರಿಸಿಕೊಂಡಿರುವುದು ಇದಕ್ಕೆ ಉದಾಹರಣೆಯಾಗಿದೆ ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಕೆ ಶಿವಲಿಂಗಯ್ಯ  ಮಾತನಾಡಿ, ಹೆಸರೇ ಹೇಳುವಂತೆ ಸುಸ್ಥಿರ ಅಭಿವೃದ್ಧಿ ಎಂದರೆ ಯಾವುದೇ ಪದಾರ್ಥವಾದರೂ ದೀರ್ಘಾವಧಿಯವರಿಗೆ ಬಳಕೆಯಲ್ಲಿ ಇರುವುದು. ಇಂದು ಯಾವ ಸಂಸ್ಥೆಯು ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದನೆ ಮಾಡುತ್ತವೆಯೋ ಅಂತಹ ಸಂಸ್ಥೆಗಳು ಮಾತ್ರ ಗ್ರಾಹಕರನ್ನು ತಲುಪುತ್ತವೆ ಹಾಗೂ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಕಾಲ ಉಳಿಯುತ್ತದೆ ಎಂದು ಹೇಳಿದರು.

ಪ್ರತಿಯೊಬ್ಬ ಮನುಷ್ಯನಿಗೂ ಆರೋಗ್ಯವೇ ಮುಖ್ಯವಾಗಿದ್ದು, ತಾನು ಸೇವಿಸುವ, ತೊಡುವ ಮತ್ತು ಜೀವಿಸುವ ಸ್ಥಳ ಪ್ರತಿಯೊಂದು ಗುಣಮಟ್ಟದಲ್ಲಿ ಇರಬೇಕೆಂದು ಭಾವಿಸುತ್ತಾನೆ. ಹೀಗಾಗಿ ಸಂಸ್ಥೆಗಳು ಗ್ರಾಹಕರ ಮಿಡಿತವನ್ನು ಅರಿತು ಒಳ್ಳೆಯ ಉತ್ಪನ್ನಗಳನ್ನು ಮಾರುಕಟ್ಟೆಗೆ ನೀಡಬೇಕು ಎಂದರು.

 

ಕಾರ್ಯಕ್ರಮದಲ್ಲಿ ಬಿ. ಐ. ಎಸ್ ನ ನಿರ್ದೇಶಕರಾದ ನರೇಂದ್ರ ರೆಡ್ಡಿ ಬೀಸು, ಕಾಸಿಯಾ ಸಂಸ್ಥೆಯ ಅಧ್ಯಕ್ಷರಾದ ಎಂ ಜಿ ರಾಜಗೋಪಾಲ್, ವಿಜ್ಞಾನಿಯಾದ ಎಚ್.ಎನ್.ಗಿರೀಶ್, ಉಪಾಧ್ಯಕ್ಷರಾದ ಬಿ.ಆರ್.ಗಣೇಶ್ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಎನ್ ಸಾಗರ್ , ಜಂಟಿ ಕಾರ್ಯದರ್ಶಿಗಳಾದ ಸತೀಶ್ ಎನ್, ಮೊಫುಸಿಲ್ ದೇವಾಪ್ಟ್ ಕಮಿಟಿಯ ಅಧ್ಯಕ್ಷರಾದ ಸಿ.ಎಂ. ಸುಬ್ರಮಣಿಯನ್, ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags: