ಮೈಸೂರು: ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದ ಚಾಲಕರೋರ್ವರ ಶವ ವರುಣಾ ಕೆರೆಯಲ್ಲಿ ಪತ್ತೆಯಾಗಿದೆ.
ರಾಜೇಂದ್ರ ಎಂಬುವವರೇ ವರುಣಾ ಕೆರೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಯಾಗಿದ್ದಾರೆ. ರಾಜೇಂದ್ರ ಅವರು, ಮೈಸೂರು ನಗರ ವಿಭಾಗದ ಸಾತಗಳ್ಳಿ ಘಟಕದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೇ ಮಾರ್ಚ್.1ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆ ವಿಶೇಷವಾದ ಹಿನ್ನೆಲೆಯಲ್ಲಿ ವಾಹನದಲ್ಲಿ ಬೆಟ್ಟದಿಂದ ಬೆಂಗಳೂರಿಗೆ ಕಾರ್ಯಾಚರಣೆ ಮಾಡುವಾಗ ಕೆ.ಎಂ.ದೊಡ್ಡಿಯ ಬೋರಾಪುರ ಗೇಟ್ ಬಳಿ ಎದುರಿನಿಂದ ಬಂದ ಕಾರಿಗೆ ಡಿಕ್ಕಿಯಾಗಿ ಕಾರು ಚಾಲಕ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದರು.
ಇದರಿಂದ ತೀವ್ರ ಮನನೊಂದಿದ್ದ ಚಾಲಕ ರಾಜೇಂದ್ರ ಅವರು, ಮನೆಗೆ ಹೋಗದೇ ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದರು. ಇಂದು ಅವರ ಶವ ಮೈಸೂರು ಬಳಿ ಇರುವ ವರುಣಾ ಕೆರೆಯಲ್ಲಿ ಪತ್ತೆಯಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಮೈಸೂರು ನಗರ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಮೃತ ರಾಜೇಂದ್ರರಿಗೆ ಇಬ್ಬರು ಮಕ್ಕಳು ಹಾಗೂ ವಯಸ್ಸಾದ ತಂದೆ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.





