Mysore
25
haze

Social Media

ಶನಿವಾರ, 20 ಡಿಸೆಂಬರ್ 2025
Light
Dark

ಮಂಡ್ಯದ ಪಾಲಿನ ಕಾವೇರಿ ತ.ನಾಡು ಪಾಲು: ಎಚ್‌ಡಿಕೆ

ಕೆ.ಆರ್.ಪೇಟೆ: ಈ ನಾಡಿನ ನೀರಾವರಿ ಯೋಜನೆಗಳಿಗೆ ಶಾಶ್ವತ ಪರಿಹಾರ ರೂಪಿಸುವುದು ನನ್ನ ಉದ್ದೇಶವಾಗಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಘೋಷಣೆ ಜಾ.ದಳ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್. ಡಿ.ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಪುರಸಭೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಜನತೆ ಅವಕಾಶ ನೀಡಬೇಕು. ಕಾಂಗ್ರೆಸ್ ಸರ್ಕಾರವು ಕೃಷ್ಣರಾಜಸಾಗರ ಜಲಾಶಯ ದಿಂದ ವಿಸಿ ನಾಲೆಗಳಿಗೆ ಹರಿಯುತ್ತಿದ್ದ ನೀರು ನಿಲ್ಲಿಸಿ ರೈತರ ಬೆಳೆ ಒಣಗಲು ಕಾರಣವಾಗಿದೆ. ಮಂಡ್ಯ ರೈತರ ಪಾಲಿನ ನೀರನ್ನು ತಮಿಳುನಾಡಿಗೆ ಹರಿಸಿದೆ ಎಂದರು.

ದಲಿತರ ಅಭಿವೃದ್ಧಿಯ 11 ಸಾವಿರ ಕೋಟಿ ರೂ. ಗ್ಯಾರಂಟಿಗೆ ಬಳಕೆ: ಜನತಾದಳದ ಅಧಿಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಶಿಕ್ಷಣ ಕ್ರಾಂತಿ, ವಿದ್ಯುತ್ ಕ್ರಾಂತಿ, ನೀರಾವರಿ ಕ್ರಾಂತಿ ಮಾಡಿ ಜಿಲ್ಲೆಯ ರೈತರ ಜನಮನದಲ್ಲಿ ನೆಲೆಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಇದರಿಂದಾಗಿ ಮಂಡ್ಯ ಜಿಲ್ಲೆಯ ಜನತೆ ನಿಮ್ಮ ಮನೆ ಮಗನ ರೀತಿ ನನ್ನನ್ನು ಸ್ವೀಕಾರ ಮಾಡಿದ್ದೀರಿ ಎಂಬುದು ಇಲ್ಲಿ ಸೇರಿರುವ ಸಾಗರೋಪಾದಿಯ ಜನರನ್ನು ನೋಡಿದರೆ ತಿಳಿಯುತ್ತದೆ ಎಂದು ಹೇಳಿದರು.

2006ರಲ್ಲಿ ಲಾಟರಿ ಲಾಬಿ, ಸಾರಾಯಿ ಲಾಬಿಗೆ ಮಣಿಯದೇ ಬಡವರ ಹಿತದೃಷ್ಟಿಯಿಂದ ಲಾಟರಿ ಮತ್ತು ಸಾರಾಯಿ ನಿಷೇಧ ಮಾಡಿದೆ. ರೈತರ ನೆಮ್ಮದಿಗಾಗಿ ಸಂಪೂರ್ಣ ಸಾಲ ಮನ್ನಾ ಮಾಡಿದೆ ಆದರೆ ಕಾಂಗ್ರೆಸ್ ಸರ್ಕಾರ ದಲಿತರಿಗೆ ಮೀಸಲಿಟ್ಟ 11ಸಾವಿರ ಕೋಟಿ ರೂ. ಅನುದಾನವನ್ನು 5 ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುವ ಮೂಲಕ ದಲಿತರಿಗೆ ಅನ್ಯಾಯ ಮಾಡಿದೆ. 1951 ಮತ್ತು 1952ರ ಲೋಕಸಭಾ ಚುನಾವಣೆಗಳಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸುವ ಮೂಲಕ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಬೇಕು ಎಂದು ಕೋರಿದರು.

35 ವರ್ಷಗಳಿಂದ ಮಂಡ್ಯ ಜಿಲ್ಲೆಯ ಜನತೆ ನಾನು ಸೂಚಿಸಿದ ಜಾ.ದಳ ಪಕ್ಷದ ಅಭ್ಯರ್ಥಿಗಳಿಗೆ ಅತಿ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿದ್ದೀರಿ, ಇದೇ ಮೊದಲ ಬಾರಿಗೆ ನಾನೇ ನೇರವಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಜಾ.ದಳ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿರುವ ನನಗೆ – ಹೆಚ್ಚು ಮತ ನೀಡಿ ನಿಮ್ಮ ಸೇವೆಗೆ ಅವಕಾಶ ಕಲ್ಪಿಸಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದರು.

Tags:
error: Content is protected !!