ಮೈಸೂರು : ಯುವಜನರಿಗೆ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗುವ ಹುಚ್ಚು ಕಡಿಮೆಯೇನಿಲ್ಲ. ಹೀಗಾಗಿ, ತರಹೇವಾರಿ ರೀಲ್ಸ್‌ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚುವುದು ಸರ್ವೇ ಸಾಮಾನ್ಯವಾಗಿದೆ. ಅಂತದ್ದೆ ಇಲ್ಲೊಂದು ಘಟನೆ ನಡೆದಿದೆ. ಯುವಕನೊಬ್ಬ ಗನ್ ಹಿಡಿದು, ಸರ್ಕಾರಿ ಕಾರು ಬಳಸಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.
ನಗರದ ಟಿ.ಕೆ ಬಡಾವಣೆಯ ವಿನೋದ ಎಂಬ ಯುವಕ ಗನ್ ಹಿಡಿದು ವೀಡಿಯೋ ಮಾಡಿದ್ದಾನೆ. ಈತ ಜ್ಯೂವೆಲರಿ ಅಂಗಡಿಯೊಬ್ಬರ ಮಗ ಎನ್ನಲಾಗಿದೆ. ಗನ್ ಹಿಡಿದು ಸರ್ಕಾರಿ ಕಾರಿನಲ್ಲಿ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾನೆ. ಇದೀಗ ಅದು ಎಲ್ಲೆಡೆ ವೈರಲ್ ಆಗಿದೆ.
ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಸರಸ್ವತಿಪುರಂ ಹಾಗೂ ಕೃಷ್ಣರಾಜ ಸಂಚಾರ ಪೊಲೀಸರಿಂದ ವಿಚಾರಣೆ ನಡೆಯುತ್ತಿದೆ. ವಿಚಾರಣೆ ವೇಳೆ ಆತ ಇದು ಹಳೆಯ ವಿಡಿಯೋ ಎಂದು ಮಾಹಿತಿ ನೀಡಿದ್ದಾನೆ.
ಅಲ್ಲದೇ, ತಾನು ಹಿಡಿದಿರುವುದು ಅಸಲಿ ಗನ್ ಅಲ್ಲ, ಅದು ಪಟಾಕಿ ಗನ್, ರೀಲ್ಸ್‌ಗಾಗಿ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಸರ್ಕಾರಿ ವಾಹನ ಯಾವುದು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.





