ಮೈಸೂರು: ಮೈಸೂರು ಜಿಲ್ಲಾ ಹಾಲು ಒಕ್ಕೂಟದ ( ಮೈಮುಲ್) ನೂತನ ಅಧ್ಯಕ್ಷರಾಗಿ ಆರ್.ಚೆಲುವರಾಜು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಆಲನಹಳ್ಳಿಯಲ್ಲಿರುವ ಮೆಗಾ ಡೇರಿಯಲ್ಲಿ ಬುಧವಾರ(ಆ.7) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತಿ.ನರಸೀಪುರ ತಾಲೂಕಿನ ಆರ್.ಚೆಲುವರಾಜು ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರು.
ನಾಮಪತ್ರ ಸಲ್ಲಿಕೆಗೆ ನಿಗದಿಪಡಿಸಿದ್ದ ಮ. 12 ಗಂಟೆಯವರೆಗೆ ಬೇರೆ ಯಾರೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಲಿಲ್ಲ. ನಂತರ, ಚುನಾವಣಾ ಪ್ರಕ್ರಿಯೆಯನ್ನು ಶುರು ಮಾಡಿದ ಚುನಾವಣಾಧಿಕಾರಿಯಾಗಿದ್ದ ಉಪ ವಿಭಾಗಾಧಿಕಾರಿ ಕೆ.ಆರ್.ರಕ್ಷಿತ್ ನಾಮಪತ್ರ ಪರಿಶೀಲನೆ ನಡೆಸಿ ಕ್ರಮಬದ್ಧವಾಗಿ ಇರುವುದನ್ನು ಪ್ರಕಟಿಸಿದರು.
ನಂತರ ಉಳಿದ ಪ್ರಕ್ರಿಯೆಯನ್ನು ಮುಗಿಸಿದ ಚುನಾವಣಾಧಿಕಾರಿ ಆರ್.ಚೆಲುವರಾಜು ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಈ ಮೂಲಕ ಪಿ.ಎಂ.ಪ್ರಸನ್ನ ಅವರ ರಾಜೀನಾಮೆಯಿಂದ ಕಳೆದ ಒಂದು ತಿಂಗಳಿಂದ ತೆರವಾಗಿದ್ದ ಮೈಮುಲ್ ಅಧ್ಯಕ್ಷ ಸ್ಥಾನಕ್ಕೆ ತೆರೆ ಬಿದ್ದಿದೆ.