ಮೈಸೂರು : ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ಬಡಾವಣೆಗಳು,ಹಳ್ಳಿಗಳಿಂದ ಆಗಮಿಸಿ ವ್ಯಾಸಂಗ ಮಾಡುವ ಬಡ ವಿದ್ಯಾರ್ಥಿನಿಯರು ಮಧ್ಯಾಹ್ನದ ಹೊತ್ತು ಹಸಿವಿನಿಂದ ಇರಬಾರದೆಂದು ಶಾಸಕ ಜಿ.ಟಿ.ದೇವೇಗೌಡ ಹಾಗೂ ಆಪ್ತ ಸ್ನೇಹಿತರ ನೆರವಿನೊಂದಿಗೆ ಸೋಮವಾರದಿಂದ ವಿಜಯನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.
ಕಾಲೇಜು ಆವರಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಇಸ್ಕಾನ್‌ನ ಅಕ್ಷಯಪಾತ್ರ ಫೌಂಡೇಶನ್‌ನ ಅಧ್ಯಕ್ಷ ಸ್ತೋಕ ಕೃಷ್ಣಸ್ವಾಮಿ ವಿದ್ಯಾರ್ಥಿಗಳಿಗೆ ಊಟ ಬಡಿಸುವ ಮೂಲಕ ಚಾಲನೆ ನೀಡಿದರು. ವಿದ್ಯಾರ್ಥಿನಿಯರಿಗೆ ತಾವೇ ಬಡಿಸಿ ಯೋಗ ಕ್ಷೇಮ ವಿಚಾರಿಸುವ ಮೂಲಕ ಮುಂದಿನ ದಿನಗಳಲ್ಲಿ ನೆಮ್ಮದಿಯಿಂದ ಊಟ ಮಾಡುವ ಜತೆಗೆ, ಓದಿನ ಕಡೆಗೆ ಗಮನಹರಿಸುವಂತೆ ಹೇಳಿದರು.
ಬಳಿಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಇಸ್ಕಾನ್‌ನ ಅಕ್ಷಯಪಾತ್ರ ಫೌಂಡೇಶನ್‌ನ ಅಧ್ಯಕ್ಷ ಸ್ತೋಕ ಕೃಷ್ಣಸ್ವಾಮಿ, ಶಾಸಕ ಜಿ.ಟಿ.ದೇವೇಗೌಡರು ಇಸ್ಕಾನ್ ದೇವಾಲಯಕ್ಕೆ ಅನೇಕ ವರ್ಷಗಳ ಕಾಲದಿಂದಲೂ ಬರುತ್ತಿದ್ದಾರೆ. ನಮ್ಮ ಮತ್ತು ಅವರ ನಡುವೆ ಉತ್ತಮ ಬಾಂಧವ್ಯವಿದೆ. ಜನರ ಹಿತ ಕಲ್ಯಾಣಕ್ಕಾಗಿ ಸದಾ ಯೋಜಿಸುವುದನ್ನು ಗಮನಿಸಿದ್ದೇವೆ ಎಂದರು.
ಜನರ ಕಷ್ಟ ಸುಖವನ್ನು ಅರಿತು ಕೆಲಸ ಮಾಡುವುದನ್ನು ಗಮನಿಸಿದ್ದೇನೆ. ಕೆಲವರು ಸ್ವಾರ್ಥ, ಹಣ ಸಂಪಾದನೆಗೆ ರಾಜಕಾರಣಿಗಳಾಗುತ್ತಾರೆ.ಹಲವರು ಜನರ ಹಿತಕ್ಕೆ ರಾಜಕಾರಣ ವಾಡುತ್ತಾರೆ. ಅದರಲ್ಲಿ ಮುಖ್ಯವಾಗಿ ಶಾಸಕ ಜಿ.ಟಿ.ದೇವೇಗೌಡರು ಒಬ್ಬರಾಗಿದ್ದಾರೆ ಎಂದು ಬಣ್ಣಿಸಿದರು.
ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸರ್ಕಾರವೇ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ. ಆದರೆ, ಕಾಲೇಜು ಮಕ್ಕಳಿಗೆ ಯಾವುದೇ ಸ್ಕೀಂ ಇಲ್ಲ.ಮೊದಲ ಬಾರಿಗೆ ಕಾಲೇಜು ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ವಾಡಲು ಕಲ್ಪನೆ ವಾಡಿದ್ದು ಶಾಸಕ ಜಿ.ಟಿ.ದೇವೇಗೌಡ ಅವರೇ ಆಗಿದ್ದಾರೆ. ನಮಗೆ ದೇವಾಲಯ ನಡೆಸುವುದು ಮುಖ್ಯವಾದ ಕಾರ್ಯ. ಬಂದವರಿಗೆ ದಾಸೋಹ,ಅಧ್ಯಾತ್ಮಿಕ ಜ್ಞಾನವನ್ನು ಹೇಳಿಕೊಡುತ್ತೇವೆ. ಈಗ ಕಾಲೇಜಿಗೆ ಊಟ ಬಡಿಸುವ ವ್ಯವಸ್ಥೆ ಮಾಡಬೇಕು ಎಂದಾಗ ಹೇಗೆ ಕೊಡುವುದು ಎನ್ನುವ ಯೋಚನೆ ಬಂದಿತು. ಅದಕ್ಕಾಗಿ ಖುದ್ದು ದೇವೇಗೌಡರು ಬೇರೆ ಬೇರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಿಸಿ ಹಣಕೊಡುವ ವ್ಯವಸ್ಥೆ ವಾಡಿಕೊಟ್ಟಿದ್ದರಿಂದ ಒಪ್ಪಿಕೊಂಡಿದ್ದೇವೆ. ನಾವು ಸದಾ ಖಾಸಗಿಯವರ ಮತ್ತು ಸಿಎಸ್ ಆರ್ ನಿಧಿ ನೆರವಿನಿಂದ ಇಂತಹ ಕಾರ್ಯಕ್ರಮವನ್ನು ವಿಸ್ತರಿಸುತ್ತಿದ್ದೇವೆ ಎಂದು ನುಡಿದರು.
ಮಾತುಕೊಟ್ಟಂತೆ ಶುರು
ಶಾಸಕ ಜಿ.ಟಿ.ದೇವೇಗೌಡ ಅವರು ಮಾತನಾಡಿ, ಮಧ್ಯಾಹ್ನದ ಹೊತ್ತು ಊಟಕ್ಕಾಗಿ ದೂರಕ್ಕೆ ಹೋಗಬೇಕಾದ ವಿಚಾರವನ್ನು ವಿದ್ಯಾರ್ಥಿಗಳು ಹೇಳಿದ್ದರು. ಹೇಗಾದರೂ ಮಾಡಿ ಮಧ್ಯಾಹ್ನದ ಊಟ ವ್ಯವಸ್ಥೆ ಮಾಡಬೇಕೆಂದು ಯೋಚಿಸಿದಾಗ ಅಕ್ಷಯ ಪಾತ್ರ ಫೌಂಡೇಶನ್ ನೆನಪಾಯಿತು. ತಕ್ಷಣವೇ ಅವರೊಂದಿಗೆ ಮಾತನಾಡಿದಾಗ ಒಪ್ಪಿಕೊಂಡರು. ನಾನು ಸೇರಿದಂತೆ ನಮ್ಮ ಆತ್ಮೀಯ ಸ್ನೇಹಿತರು ಸೇರಿಕೊಂಡು ಮಕ್ಕಳಿಗೆ ಊಟ ಪೂರೈಕೆಗೆ ಆಗುವ ವೆಚ್ಚವನ್ನು ಭರಿಸುತ್ತೇವೆ. ಮುಂದಿನ ದಿನಗಳಲ್ಲಿ ನಿರಂತರವಾಗಿ ಊಟ ವಿತರಣೆಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ್ದೇವೆ.ಈ ಹಿಂದೆ ವಿಜಯನಗರ ಕೃೃಷ್ಣದೇವರಾಯರ ಆಳ್ವಿಕೆಯ ಕಾಲದಲ್ಲಿ ಯಾವುದೇ ಕಾರ್ಯಕ್ರಮ ಆರಂಭವಾದರೂ ಅದು ಜಗತ್ತಿಗೆ ಮಾದರಿಯಾಗುತ್ತಿತ್ತು.ಇದೀಗ ಅದೇ ರೀತಿ ನಮ್ಮ ಮೈಸೂರಿನ ವಿಜಯನಗರದಲ್ಲಿ ಆರಂಭವಾಗಿರುವ ಈ ಕಾಲೇಜಿನ ಬಿಸಿಯೂಟ ಯೋಜನೆ ರಾಜ್ಯದಾದ್ಯಂತ ಪ್ರಾರಂಭವಾಗಲಿ ಎಂದು ಆಶಿಸಿದರು.
ಅಕ್ಷಯ ಪಾತ್ರ ಫೌಂಡೇಶನ್ ಉಪ ಉಪಾಧ್ಯಕ್ಷ ಕೃಷ್ಣ ಕೇಶವದಾಸ್, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಮುಡಾ ಮಾಜಿ ಅಧ್ಯಕ್ಷ ಎಚ್.ಎನ್.ವಿಜಯ್, ಮಹೇಶ್ ಶೆಣೈ.ಕಾಂತರಾಜು,ಶ್ರೀಕಾಂತ್, ವೀರೇಶ್, ಮಂಚೇಗೌಡ, ಮರಟಿಕ್ಯಾತನಹಳ್ಳಿ ವೆಂಕಟೇಶ್,ನಂಜುಂಡೇಗೌಡ,ನೇತ್ರಾ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಪ್ರೊ.ಡಿ.ಎಸ್.ಪ್ರತಿಮಾ, ಹೂಟಗಳ್ಳಿ ನಗರಸಭೆ ಆಯುಕ್ತ ಬಿ.ಎನ್.ಚಂದ್ರಶೇಖರ್,ಕಾಲೇಜು ಪ್ರಾಂಶುಪಾಲಡಾ.ಕೆ.ಸಿ.ಭದ್ರಗಿರಿಯಯ್ಯ,ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಎಸ್.ಆನಂದಕುಮಾರ್ ಮತ್ತಿತರರು ಹಾಜರಿದ್ದರು.




