ಮೈಸೂರು: ಬಿಜೆಪಿ ಅವರ ಮೈಸೂರು ಚಲೋ ಪಾಪದ ಯಾತ್ರೆ ಇಂದಿಗೆ ಅಂತ್ಯಗೊಂಡಿದೆ. ಆ ಮೂಲಕ ಬಿಜೆಪಿಗರ ಮೇಲೆ ಅಂಟಿಕೊಂಡಿದ್ದ ಕೊಳೆಯನ್ನು ಇಂದು ತೊಳೆದುಕೊಂಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಕಟುವಾಗಿ ಟೀಕಿಸಿದರು.
ಮೈಸೂರು ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಮೈಸೂರು ಚಲೋ ಪಾದಯಾತ್ರೆ ಹಮ್ಮಿಕೊಂಡಿದ್ದು, ಅದರ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಮೈಸೂರಿನಲ್ಲಿಂದು ಆಯೋಜಿಸಿದ್ದರು.
ಮೈಸೂರಿನಲ್ಲಿಂದು ನಡೆದ ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ಎಂ. ಲಕ್ಷ್ಮಣ್, ಪೋಕ್ಸೋ ಪ್ರಕರಣದ ಆರೋಪಿಯಾಗಿರುವ ಬಿಎಸ್‌ವೈ ಅವರು ಹೈಕಮಾಂಡ್ ಕೃಪಕಟಾಕ್ಷದಿಂದ ಹೊರಗಿದ್ದಾರೆ. ಇತ್ತ ಅಶೋಕ್ ಅವರು ತಮ್ಮ ಬ್ರೇನ್ ಹಾಗೂ ನಾಲಿಗೆಗೆ ಸಂಬಂಧ ಇಲ್ಲದೇ ಮಾತನಾಡುತ್ತಿದ್ದಾರೆ. ವಿಪಕ್ಷ ನಾಯಕರ ಸ್ಥಾನ ಉಳಿಸಿಕೊಳ್ಳಲು ಬಾಯಿಗೆ ಬಂದಂತೆ ಮಾತನಾಡುತ್ತಿದ್ದೀರಾ. ಸಿಎಂ ಸಿದ್ದರಾಮಯ್ಯ ಹಾಗೂ ನಿಮ್ಮ ಬಳಿಯಿರುವ ಆಸ್ತಿ ಮಾಹಿತಿ ಎಷ್ಟು ಎಂಬುದನ್ನು ತಿಳಿಸಿ ಎಂದು ಕಿಡಿಕಾರಿದರು.
ಮುಡಾದಲ್ಲಿ ಸಿಎಂ ಆಸ್ತಿ ಹೊಂದಿರುವುದಾಗಿ ಬಿಜೆಪಿ ಪುಸ್ತಕ ಬಿಡುಗಡೆ ಮಾಡಿದೆ. ಇದರಲ್ಲಿ ಯಾವೆಲ್ಲಾ ಸೈಟ್ ಅಕ್ರಮವಾಗಿದೆ ಎಂಬುದನ್ನು ಮೊದಲು ತಿಳಿಸಲಿ. ನಾವು ಅಧಿಕಾರಕ್ಕೆ ಬಂದಮೇಲೆ ಮುಡಾ ಹಗರಣ ತನಿಖೆ ಆರಂಭವಾಗಿದ್ದು, ಹೀಗಿರುವಾಗ ಸಿಎಂ ಹಗರಣ ಮಾಡಿರುವುದು ಎಲ್ಲಿಂದ ಬಂತು. ಮೈತ್ರಿ ಸರ್ಕಾ ಸುಳ್ಳು ಹೇಳುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.





