ಮೈಸೂರು: ಮೈಸೂರು ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಲಕ್ಷ್ಮಣ್ ಹಾಗೂ ಬಿಜೆಪಿಯಿಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಣಕ್ಕಿಳಿದಿದ್ದಾರೆ. ಸದ್ಯ ಈ ಇಬ್ಬರೂ ಅಭ್ಯರ್ಥಿಗಳು ಪ್ರಚಾರ ಕಾರ್ಯಗಳಲ್ಲಿ ನಿರತರಾಗಿದ್ದು, ನಿನ್ನೆ ( ಏಪ್ರಿಲ್ 3 ) ಹೆಚ್ ವಿಶ್ವನಾಥ್ ಇಬ್ಬರ ನಡುವಿನ ಸ್ಪರ್ಧೆಯ ಬಗ್ಗೆ ಮಾತನಾಡಿ ಯದುವೀರ್ ಅವಿರೋಧ ಆಯ್ಕೆಯಾಗಬೇಕು ಎಂದಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಲಕ್ಷ್ಮಣ್ ʼಹೆಚ್ ವಿಶ್ವನಾಥ್ ಈಗಾಗಲೇ ಬಿಜೆಪಿಯಿಂದ ಎಂಎಲ್‌ಸಿ ಆಗಿದ್ದಾರೆ. ಅವರು ಬಿಜೆಪಿ ಪಕ್ಷದವರು. ಅವರ ಅಭ್ಯರ್ಥಿ ಪರ ನಿಲ್ಲುವುದು ಸಹಜ. ಅವರು ನಮ್ಮ ಪಕ್ಷದವರಲ್ಲ ಹಾಗಾಗಿ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ನನ್ನ ಪರವಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಗಲಿರುಳು ಎನ್ನದೇ ಶ್ರಮಿಸುತ್ತಿದ್ದಾರೆ. ನಮ್ಮ ಸರ್ಕಾರದ ಯೋಜನೆಗಳು ಹಾಗೂ ಜನಪರ ಆಡಳಿತ ನನ್ನ ಕೈಹಿಡಿಯಲಿವೆ ಎಂಬ ನಂಬಿಕೆ ಇದೆʼ ಎಂದು ಲಕ್ಷ್ಮಣ್ ಹೇಳಿದರು.
ಹೆಚ್ ವಿಶ್ವನಾಥ್ ಏನು ಹೇಳಿದ್ದರು?
ʼರಾಜಪ್ರಭುತ್ವದ ಕುಡಿ ಪ್ರಜಾಪ್ರಭುತ್ವದ ಪ್ರತಿನಿಧಿಯಾಗಲು ಸ್ಪರ್ಧಿಸಿದ್ದಾರೆ. ಯದುವೀರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕಿದೆ. ಕಾಂಗ್ರೆಸ್‌ಗೆ ಇನ್ನೂ ಕಾಲ ಮಿಂಚಿಲ್ಲ. ಅನ್ನ, ಅಕ್ಷರ, ಆರೋಗ್ಯ ಕೊಟ್ಟ ಯದುವಂಶಕ್ಕೆ ಗೌರವ ಕೊಟ್ಟು ಯದುವೀರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕುʼ ಎಂದು ಹೆಚ್ ವಿಶ್ವನಾಥ್ ಹೇಳಿದ್ದರು.





