ಮೈಸೂರು: ಇ-ಖಾತಾ, ಆಸ್ತಿ ದಾಖಲೆಗಳನ್ನು ಪಡೆಯಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತ ಪೊಲೀಸರು, ಶುಕ್ರವಾರ ನಗರಪಾಲಿಕೆ ವಲಯ ಕಚೇರಿಗಳು ಹಾಗೂ ಪಟ್ಟಣ ಪಂಚಾಯ್ತಿ ಕಚೇರಿಗಳ ಮೇಲೆ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿಗಳಲ್ಲಿ ಆಸ್ತಿಗಳ ಇ-ಖಾತಾ ಪಡೆಯಲು ಮತ್ತು ಇತರ ಸಂಬಂಧಿತ ಕೆಲಸಗಳನ್ನು ಪೂರ್ಣಗೊಳಿಸಲು ಆಸ್ತಿ ಮಾಲೀಕರಿಂದ 40,000 ರೂ.ಗಳಿಂದ 1 ಲಕ್ಷ ರೂ.ಗಳವರೆಗೆ ಲಂಚ ಕೇಳಲಾಗುತ್ತಿದೆ ಎಂದು ಸಾಕಷ್ಟು ಸಾರ್ವಜನಿಕರು ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ, ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಅಧಿಕಾರಿಗಳಿಗೆ ಶಾಕ್ ನಿಡಿದ್ದಾರೆ. ನಗರದ 5 ವಲಯ ಕಚೇರಿಗಳು ಮತ್ತು 3 ಪಟ್ಟಣ ಪಂಚಾಯಿತಿಗಳ ಮೇಲೆ ದಾಳಿ ನಡೆಸಿದರು.
ನಗರಪಾಲಿಕೆಯ ವಲಯ ಕಚೇರಿಗಳ 2,3,7,8 ಮತ್ತು 9 ಹಾಗೂ ಶ್ರೀರಾಂಪುರ, ಬೋಗಾದಿ ಮತ್ತು ರಮ್ಮನಹಳ್ಳಿ ಪಟ್ಟಣ ಪಂಚಾಯ್ತಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ.
ಬೆಳಿಗ್ಗೆ 11.30 ರ ಸುಮಾರಿಗೆ ದಾಳಿ ನಡೆಸಲಾಯಿತು. ದಾಳಿಯ ಸಮಯದಲ್ಲಿ, ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳು, ಕಡತಗಳು, ರಿಜಿಸ್ಟರ್‌ಗಳು ಮತ್ತು ಇತರ ದಾಖಲೆಗಳನ್ನು ಪರಿಶೀಲಿಸಿದರು.
ಇದೇ ವೇಳೆ ಇ-ಖಾತಾ ಮಾಡಿಕೊಡುವ ಸಂಬಂದ ಸರ್ವರ್ ಸಮಸ್ಯೆ ಇದೆ ಎಂಬ ಫಲಕಗಳನ್ನು ಕೆಲ ಕಚೇರಿಗಳ ಮುಂದೆ ಪ್ರದರ್ಶಿಸಲಾಗಿತ್ತು. ಇದಕ್ಕೆ ಬೇಸರ ವ್ಯಕ್ತಪಡಿಸಿದ ಲೋಕಾ ಅಧಿಕಾರಿಗಳು ಇದು ಲಂಚಕ್ಕೆ ಬೇಡಿಕೆ ಇಡುವ ಉಪಾಯವೇ ಎಂದು ಪ್ರಶ್ನಿಸಿದರು ಎನ್ನಲಾಗಿದೆ.





