ಹುಣಸೂರು: ತಾಲ್ಲೂಕಿನ ಬಿಳಿಕೆರೆ ಹೋಬಳಿಯ ನಂಜಾಪುರ, ಗೌರಿಪುರ ಗ್ರಾಮಗಳ ಸುತ್ತಮುತ್ತ ಕಳೆದೊಂದು ವಾರದಿಂದ ಹುಲಿ ಅಡ್ಡಾಡಿರುವ ಹೆಜ್ಜೆ ಗುರುತು ಪತ್ತೆಯಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ನಂಜಾಪುರದ ಸಿದ್ದರಾಜು, ಪುಟ್ಟಶೆಟ್ಟಿ, ವಿಠಲ್, ಮನುಕುಮಾರ್, ಗೌರಿಪುರದ ಚಿಕ್ಕಕಣ್ಣೀಗೌಡರ ಜಮೀನಿನಲ್ಲಿ ಹಾಗೂ ಬಳಗಾರನಕಟ್ಟೆ ಬಳಿ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಪಕ್ಕದ ಧರ್ಮಾಪುರ ಅರಣ್ಯ ಪ್ರದೇಶದತ್ತ ಹೋಗಿರುವ ಹೆಜ್ಜೆ ಗುರುತು ಪತ್ತೆಯಾಗಿದೆ.
ಈ ಭಾಗದಲ್ಲಿ ವಿಪರೀತ ಚಿರತೆ, ಹಂದಿ ಕಾಟವೂ ಇದ್ದು, ರೈತರು ಹಾಗೂ ಗ್ರಾಮಸ್ಥರು ಸಂಜೆಯಾದರೆ ಓಡಾಡಲು ಹೆದರುತ್ತಿದ್ದಾರೆ. ಸ್ಥಳಕ್ಕೆ ಪ್ರಾದೇಶಿಕ ಅರಣ್ಯ ವಿಭಾಗದ ಗಸ್ತು ಅರಣ್ಯ ಪಾಲಕ ಗಣೇಶ್ ಹಾಗೂ ಸಿಬ್ಬಂದಿ ಭೇಟಿ ಇತ್ತು ಹೆಜ್ಜೆ ಗುರುತು ಪರಿಶೀಲಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪರಿಶೀಲಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವನ್ಯಪ್ರಾಣಿಯ ಸೆರೆಗೆ ಬೋನು ಇರಿಸಿ ಕ್ರಮವಹಿಸಲಾಗುವುದು ಎಂದು ಆರ್‌ಎಫ್‌ಒ ನಂದಕುಮಾರ್ ತಿಳಿಸಿದ್ದಾರೆ.
ಹುಲಿ ಚಿರತೆ ಕಾಟ ತಪ್ಪಿಸಿ: ಈ ಭಾಗದಲ್ಲಿ ಸಾಕಷ್ಟು ಚಿರತೆಗಳೂ ಇದ್ದು, ಅರಣ್ಯ ಇಲಾಖೆ ಬೋನು ಇಟ್ಟು ಚಿರತೆ ಸೆರೆಹಿಡಿಯಬೇಕೆಂದು ಗ್ರಾ.ಪಂ. ಸದಸ್ಯ ನಂಜಾಪುರ ಮನುಕುಮಾರ್ ಆಗ್ರಹಿಸಿದ್ದಾರೆ.





