Mysore
20
overcast clouds
Light
Dark

ದಸರಾ ಪ್ರಾಧಿಕಾರ ರಚನೆ ಮಾಡಲಿ: ಸಂಸದ ಪ್ರತಾಪ ಸಿಂಹ

ಮೈಸೂರು:  ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ಮಾಡಿದಂತೆ ದಸರಾ ಆಚರಣೆಗೂ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಬೇಕಿತ್ತು. ಈಗಿನ ಸರ್ಕಾರವಾದರೂ ಮಾಡಲಿ ಎಂದು ಸಂಸದ ಪ್ರತಾಪಸಿಂಹ ಹೇಳಿದರು.

ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಸಭೆ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಬಹಳ ವರ್ಷಗಳಿಂದ ದಸರಾ ಪ್ರಾಧಿಕಾರ ರಚನೆ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಇದಕ್ಕೆ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಯಿತು. ಈಗಿನ ಸರ್ಕಾರವಾದರೂ ದಸರಾ ಪ್ರಾಧಿಕಾರ ರಚನೆ ಮಾಡಬೇಕು ಎಂದು ಹೇಳಿದರು.

ಮೈಸೂರು ವಸ್ತು ಪ್ರದರ್ಶನದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸ್ವದೇಶಿ ದರ್ಶನ್ ಯೋಜನೆಯಡಿ 80 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ವಿಚಾರದ ಕುರಿತು ಇಂದು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಕೆಲವೇ ದಿನಗಳಲ್ಲಿ ಡಿಪಿಆರ್ ಸಿದ್ದಪಡಿಸಿದ ಬಳಿಕ ಕಾಮಗಾರಿ ಆರಂಭಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಮೈಸೂರು ವಸ್ತು ಪ್ರದರ್ಶನವನ್ನು ವರ್ಷ ಪೂರ್ತಿ ತೆರೆಯುವಂತೆ ಮತ್ತು ವಿವಿಧ ದೇಶೀಯ ಬ್ರಾಂಡ್ ನ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ಇಲ್ಲೇ ಆರಂಭಿಸಿ ಎಲ್ಲಾ ಮಾದರಿಯ ಬ್ರಾಂಡ್ ಗಳು ಒಂದೇ ಭಾಗದಲ್ಲಿ ಸಿಗುವ ಹಾಗೆ ವಸ್ತು ಪ್ರದರ್ಶನವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.

ಅನಧಿಕೃತ ತೆರವು ಮಾಡಲಿ: ಚಾಮುಂಡಿ ಬೆಟ್ಟದ ಪಾವಿತ್ಯ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅನಧಿಕೃತವಾಗಿ ನೆಲೆಸಿರುವವರನ್ನು ತೆರವುಗೊಳಿಸಬೇಕಿದೆ. ಚಾಮುಂಡಿಬೆಟ್ಟಕ್ಕೆ ಪ್ರತ್ಯೇಕ ಪ್ರಾಧಿಕಾರ ಮಾಡಿರುವುದು ಸ್ವಾಗತಾರ್ಹ. ಈಗಾಗಲೇ ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ 45 ಕೋಟಿ ಅನುದಾನ ಬಂದಿದೆ.

ಹೀಗಾಗಿ ಚಾಮುಂಡಿ ಬೆಟ್ಟದ ಮೇಲ್ಬಾಗದಲ್ಲಿ ಪಾವಿತ್ಯ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಬೇಕಿದೆ. ದೇಗುಲದ ಮುಂಭಾಗದಲ್ಲಿ ಮಂಟಪವನ್ನು ಕಟ್ಟುವ ಅಗತ್ಯವಿರಲಿಲ್ಲ. ಬೆಟ್ಟದ ಮೇಲ್ಬಾಗದಲ್ಲಿ ಬೆಂಗಳೂರಿನ ಕೆಲವರು ಆಸ್ತಿ ಮಾಡಿಕೊಂಡಿದ್ದಾರೆ. ಸಬ್ ಲೀಸ್ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ. ಹೀಗಾಗಿ ಬೆಟ್ಟಕ್ಕೆ ಸಂಬಂಧಪಡದವರನ್ನು ಅಲ್ಲಿಂದ ತೆರವುಗೊಳಿಸಬೇಕು.

ದೇವಾಲಯದ ಅರ್ಚಕ ಸಮುದಾಯ ಹಾಗು ನಾಯಕ ಸಮುದಾಯಕ್ಕೆ ಸೇರಿದ ಮೂಲ ನಿವಾಸಿಗಳನ್ನು ಹೊರತುಪಡಿಸಿ ಇತ್ತೀಚೆಗೆ ಎಲ್ಲಿಂದಲೋ ಬಂದು ಬೆಟ್ಟದಲ್ಲಿ ನೆಲೆಸಿರುವವರನ್ನು ತೆರವುಗೊಳಿಸಬೇಕು. ಚಾಮುಂಡಿ ಬೆಟ್ಟದ ಮೇಲ್ಬಾಗದಲ್ಲಿ ಹೊಸ ಕಟ್ಟಡಗಳು ನಿರ್ಮಾಣವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಇದೇ ವೇಳೆ ಮೈಸೂರಿನ ವಸ್ತು ಪ್ರದರ್ಶನ ಪ್ರಾಧಿಕಾರದ ಕಚೇರಿಯಲ್ಲಿ ಕೇಂದ್ರ ಸರ್ಕಾರದ ‘ಸ್ವದೇಶಿ ದರ್ಶನ ‘ ಯೋಜನೆಯಡಿ ವಸ್ತು ಪ್ರದರ್ಶನ ಆವರಣವನ್ನು ಅಭಿವೃದ್ಧಿಪಡಿಸಲು ಸಭೆ ನಡೆಸಿದರು. ಡೆಲೆಟ್ ಕಂಪನಿ ವತಿಯಿಂದ ಸಿದ್ಧವಾಗುತ್ತಿರುವ ಡಿಪಿಆರ್ ಕುರಿತು ಚರ್ಚಿಸಿದರು.

ಮಹಾಘಟ್ ಬಂಧನ ಪ್ರತಿಕ್ರಿಯೆಗೆ ನಿರಾಕರಣೆ: ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಯುಪಿಎ ಮೈತ್ರಿಕೂಟದ ಮಹಾಘಟಬಂಧನ್ ಸಭೆಯ ಕುರಿತು ಪ್ರತಿಕ್ರಿಯಿಸಲು ಸಂಸದ ಪ್ರತಾಪ್ ಸಿಂಹ ನಿರಾಕರಿಸಿದರು. ಕಳೆದ 5 ತಿಂಗಳು ರಾಜಕಾರಣದಲ್ಲಿ ಕ್ರಿಮಿನಲ್ಲಾಗಿ ವೇಸ್ಟ್ ಮಾಡಿದ್ದೇವೆ. ಇನ್ನುಳಿದ ಸಮಯದಲ್ಲಾದರೂ ಅಭಿವೃದ್ಧಿಯತ್ತ ಚಿಂತನೆ ಮಾಡೋಣ. ಜನರಿಗೆ ಉಪಯೋಗವಾಗುವಂತಹ ಕೆಲಸಗಳಿಗೆ ಮಾನ್ಯತೆ ಕೊಡೋಣ ಎನ್ನುವ ಮೂಲಕ ರಾಜಕೀಯ ಬೆಳವಣಿಗೆಳ ಕುರಿತು ಪ್ರತಿಕ್ರಿಯಿಸದಿರುವುದಾಗಿ ಹೇಳಿದರು.

ಸಭೆಯಲ್ಲಿ ವಸ್ತು ಪ್ರದರ್ಶನ ಪ್ರಾಧಿಕಾರದ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಗೌಡ ಸೇರಿ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ