Mysore
28
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ ಹೆಚ್ಚಾಗಿರುವ ಬಗ್ಗೆ ಮೋದಿ ಉತ್ತರಿಸಲಿ : ಎಲ್.ಹನುಂತಯ್ಯ

ಮೈಸೂರು: ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ತಂದು ಜನರಿಗೆ ಹಂಚುತ್ತೇನೆ ಎಂದು ನರೇಂದ್ರ ಮೋದಿ ಹೇಳಿದ್ದರು. ವಿಪರ್ಯಾಸವೆಂದರೆ ಕಳೆದ ೧೦ ವರ್ಷಗಳ ಅವಧಿಯಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಇಟ್ಟಿರುವ ಠೇವಣಿ ಹಣ ಶೇ.೧೧೪ ರಷ್ಟು ಹೆಚ್ಚಾಗಿದೆ. ಇದರ ಬಗ್ಗೆ ಮೋದಿ ದೇಶದ ಜನರಿಗೆ ಉತ್ತರ ಹೇಳಬೇಕು ಎಂದು ರಾಜ್ಯಸಭಾ ಮಾಜಿ ಸದಸ್ಯ ಎಲ್.ಹನುಂತಯ್ಯ ಹೇಳಿದರು.

ಮಂಗಳವಾರ ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ತಂದು ದೇಶದ ಜನರಿಗೆ ಹಂಚುತ್ತೇನೆ ಎಂದು ಮೋದಿ ಹೇಳುತ್ತಿದ್ದರೆ, ಮತ್ತೊಂದೆಡೆ ಅಲ್ಲಿನ ಬ್ಯಾಂಕ್‌ಗಳಲ್ಲಿ ಠೇವಣಿ ಇಡುವುದು ಹೆಚ್ಚುತ್ತಲೇ ಇದೆ ಎಂದರು.

ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ದೇಶದ ಜನರ ಜೀವನಮಟ್ಟವನ್ನು ಸುಧಾರಿಸಲು ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ ಬಿಜೆಪಿ ಪ್ರಣಾಳಿಕೆಯಲ್ಲಿ ನರೇಂದ್ರಮೋದಿ ಅವರನ್ನು ಸರ್ವಾಧಿಕಾರಿಯನ್ನಾಗಿ ರೂಪಿಸುವ ಎಲ್ಲಾ ಅಂಶಗಳೂ ಅವರ ಪ್ರಣಾಳಿಕೆಯಲ್ಲಿ ಅಡಗಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಬಿಜೆಪಿಗೆ ಸೋಲಿನ ಭಯ ಉಂಟಾಗಿದೆ. ಹೀಗಾಗಿ ಅವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಗ್ಯಾರಂಟಿ ಕಾರ್ಡ್ ಹಂಚದಂತೆ ಒತ್ತಡ ಹೇರುವ ಕೆಲಸ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆ ಜೊತೆಗೆ ಅಭಿವೃದ್ಧಿಗಾಗಿ ೨ ಸಾವಿರ ಕೋಟಿ ರೂ. ಹಣವನ್ನು ಮೀಸಲಿಟ್ಟಿರುವುದು ಗೊತ್ತಿಲ್ಲವೆ ಎಂದು ಪ್ರಶ್ನಿಸಿದರು.

ಕಳೆದ ೧೦ ವರ್ಷಗಳ ಅವಧಿಯಲ್ಲಿ ಮೋದಿ ಸರ್ಕಾರ ದಲಿತರು, ಬಡವರು, ಶೋಷಿತರು, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಯಾವುದೇ ಕಾರ್ಯಕ್ರಮ ರೂಪಿಸಲಿಲ್ಲ. ೨೦ ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಹೇಳಿದ್ದರು. ಆದರೆ, ಅವರ ಅಧಿಕಾರಾವಧಿಯಲ್ಲಿ ಶೇ.೪೪ ರಷ್ಟು ನಿರುದ್ಯೋಗ ದಾಖಲಾಗಿದೆ ಎಂದು ಹೇಳಿದರು.

ನಮ್ಮದು ಭ್ರಷ್ಟಾಚಾರ, ಕಳಂಕರಹಿತ ಸರ್ಕಾರ ಎಂದು ಹೇಳುತ್ತಾರೆ. ಆದರೆ, ಭ್ರಷ್ಟಾಚಾರವನ್ನೇ ಕಾನೂನು ಬದ್ದಗೊಳಿಸಲು ಹೊರಟಿದ್ದು ಇದೇ ಮೋದಿ. ಪ್ರಧಾನಮಂತ್ರಿ ಪರಿಹಾರ ನಿಧಿಯ ಲೆಕ್ಕವನ್ನು ಇದುವರೆವಿಗೂ ಕೊಡಲಿಲ್ಲ. ಚುನಾವಣಾ ಬಾಂಡ್ ಅವ್ಯವಹಾರ ದೇಶದಲ್ಲಿ ದೊಡ್ಡ ಹಗರಣವಾಗಲಿದೆ ಎಂದರು.

ಬಿಜೆಪಿಯ ಚುನಾವಣಾ ಬಾಂಡ್ ಪಡೆದವರಲ್ಲಿ ಅನೇಕರು ಇಡಿ ಹಾಗೂ ಐಟಿ ದಾಳಿಗೆ ಒಳಗಾದವರು ಅಂತಹ ಹಲವಾರು ಮಂದಿ ೩೩೦ ಕೋಟಿ ರೂ. ಮೊತ್ತದ ಬಾಂಡ್ ಖರೀದಿಸಿದ್ದಾರೆ. ಅಕ್ರಮವಾಗಿ ಹಣ ಸಂಗ್ರಹಿಸಲು ಕಾನೂನನ್ನೇ ಬದಲು ಮಾಡಿದ ಸಾಧನೆ ಮೋದಿ ಅವರದ್ದು ಎಂದು ನುಡಿದರು.

ಉದ್ಯಮಿಗಳು ಹಾಗೂ ಶ್ರೀಮಂತರನ್ನು ಹೆದರಿಸಿ ಅವರಿಂದ ಹಣ ಸುಲಿಗೆ ಮಾಡುತ್ತಿರುವ ಮೋದಿ ಸರ್ಕಾರವನ್ನು ಬ್ಲಾಕ್‌ಮೇಲ್ ಸರ್ಕಾರ ಎನ್ನುವುದಕ್ಕಿಂತ ಹಫ್ತಾ ವಸೂಲಿ ಸರ್ಕಾರ ಎನ್ನುವುದೇ ಸೂಕ್ತ ಎಂದು ಹರಿಹಾಯ್ದರು.

ತಮ್ಮ ಪಕ್ಷ ಹಾಗೂ ಕುಟುಂಬದ ಉಳಿವಿಗಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬಿಜೆಪಿ ಜೊತೆ ಸೇರಿದ್ದಾರೆ. ಜೊತೆಗೆ ಮೋದಿ ಬಿಟ್ಟರೆ ನಾಯಕರಿಲ್ಲ ಎಂಬ ಮಾತುಗಳನ್ನು ಆಡುತ್ತಾರೆ.

ಆರ್‌ಎಸ್‌ಎಸ್ ಬಗ್ಗೆ ಕುವಾರಸ್ವಾಮಿ ಅವರು ಆಡಿರುವ ಮಾತು ಹಾಗೂ ದಾಖಲೆಗಳು ಇಂದೂ ಕೂಡ ನನ್ನ ಬಳಿ ಇವೆ ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ಡಾ.ಡಿ.ತಿಮ್ಮ್ಂಯ, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪದ್ಮನಾಭ್,ಮಾಜಿ ಶಾಸಕಿ ಮಲ್ಲಾಜಮ್ಮ, ಮಾಜಿ ಮಹಾಪೌರ ಟಿ.ಬಿ.ಚಿಕ್ಕಣ್ಣ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಪಗ್ರಧಾನ ಕಾರ್ಯದರ್ಶಿಗಳಾದ ಎಂ.ಶಿವಣ್ಣ, ಈಶ್ವರ್ ಚಕ್ಕಡಿ, ಮುಖಂಡರಾದ ಆರ್.ನಾಗೇಶ್, ಬೋರೇಗೌಡ, ಗಿರೀಶ್, ಬಸಪ್ಪ ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

 

Tags: