ಹುಣಸೂರು: ಮೈಸೂರು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಮುಂದುವರಿದಿದ್ದು, ಚಿರತೆಯೊಂದು ತೋಟದ ಮನೆಗೆ ನುಗ್ಗಿ ನಾಯಿ ಮರಿಯನ್ನು ಎಳೆದೊಯ್ದ ಘಟನೆ ನಡೆದಿದೆ.
ಹುಣಸೂರು ತಾಲ್ಲೂಕಿನ ಉಂಡವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ರೈತ ಪ್ರತಾಪ್ ಎಂಬುವವರ ತೋಟದ ಮನೆಗೆ ನುಗ್ಗಿದ ಚಿರತೆ ನಾಯಿ ಮರಿಯನ್ನು ಎಳೆದೊಯ್ದು ತಿಂದು ಹಾಕಿದೆ.
ಚಿರತೆ ನಾಯಿ ಮರಿ ಎಳೆದುಕೊಂಡು ಹೋದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ರೈತ ಪ್ರತಾಪ್ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಬೋನು ಅಳವಡಿಸಿದ್ದು, ಅನಗತ್ಯವಾಗಿ ಹೊರಗಡೆ ಬರದಂತೆ ಅಕ್ಕಪಕ್ಕದಲ್ಲಿರುವ ಜನತೆಗೆ ಮನವಿ ಮಾಡಿದ್ದಾರೆ.





