ಪಿರಿಯಾಪಟ್ಟಣ: ನರೇಗಾ ಯೋಜನೆಯ ಕೂಲಿ ದರವನ್ನು ಏಪ್ರಿಲ್ 1 ರಿಂದ 370 ರೂ. ಗೆ ಏರಿಕೆ ಮಾಡಲಾಗಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಯೋಜನೆಯಡಿ ದುಡಿಯುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಸಹಾಯಕ ನಿರ್ದೇಶಕರಾದ ವಸಂತಲಕ್ಷ್ಮೀ ಸಲಹೆ ನೀಡಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ “ಸ್ತ್ರೀ ಚೇತನ ವಿಶೇಷ ಅಭಿಯಾನ” ಕಾರ್ಯಕ್ರಮಕ್ಕೆ ಜಾಬ್ ಕಾರ್ಡ್ ವಿತರಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮಹಾತ್ಮ ಗಾಂಧಿ ನರೇಗಾದಲ್ಲಿ ಶೇ.50ರಷ್ಟಿರುವ ಮಹಿಳಾ ಕೂಲಿ ಕಾರ್ಮಿಕರ ಸಂಖ್ಯೆಯನ್ನು ಶೇ.60ಕ್ಕೆ ಹೆಚ್ಚಿಸುವುದು ಅಭಿಯಾನದ ಉದ್ದೇಶವಾಗಿದೆ. ಮಾತ್ರವಲ್ಲದೆ, ಮೂರು ತಿಂಗಳು ಮಹಿಳಾ ಕೂಲಿ ಕಾರರಿಗೆ ನಿರಂತರ ಕೆಲಸ ಆದ್ಯತೆ ನೀಡುವುದಾಗಿದ್ದು, ಮಹಿಳಾ ಸಬಲೀಕರಣವನ್ನು ನರೇಗಾ ಯೋಜನೆ ಮೂಲಕ ಕೈಗೊಳ್ಳುವುದು ಸ್ತ್ರೀ ಚೇತನ ಅಭಿಯಾನದ ಉದ್ದೇಶವಾಗಿದೆ ಎಂದರು.
ಮಾನವ ಸರಪಳಿ ನಿರ್ಮಾಣ: ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಮಹಿಳೆಯರಿಂದ ಮಾನವ ಸರಪಳಿಯನ್ನು ನಿರ್ಮಿಸಿ ಸ್ತ್ರೀ ಚೇತನ ಅಭಿಯಾನ ಬ್ಯಾನರ್ ನೊಂದಿಗೆ ಏಕೀಕೃತ ಸಹಾಯವಾಣಿ ಸಂಖ್ಯೆ 8277506000 ಹಾಗೂ ಕೂಲಿ ದರ 370ರೂ. ಸಂಬಂಧಿಸಿದಂತೆ ಮಾಹಿತಿ ಪ್ರದರ್ಶನ ಮಾಡಲಾಯಿತು.





