ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಹಿರಂಗ ಪ್ರಚಾರದ ಕೊನೆಯ ದಿನವಾದ ಬುಧವಾರ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭರ್ಜರಿ ಪ್ರಚಾರ ನಡೆಸಿದರು.
ಬೆಳಿಗ್ಗೆಯಿಂದ ಬಹಿರಂಗ ಪ್ರಚಾರ ಅಂತ್ಯವಾಗುವ ತನಕವೂ ಬಿಡುವಿಲ್ಲದೆ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.
ಕೃಷ್ಣರಾಜ, ನರಸಿಂಹರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿ ತಮ್ಮನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು. ಎಂ.ಜಿ.ರಸ್ತೆಯ ರೈತರ ಮಾರುಕಟ್ಟೆಗೆ ತೆರಳಿದ ಯದುವೀರ್ ವ್ಯಾಪಾರಿಗಳಿಗೆ ಕರಪತ್ರ ನೀಡಿ ಬಿಜೆಪಿಗೆ ಮತ ನೀಡುವಂತೆ ಕೋರಿದರು.
ಯದುವೀರ್ ಕೈ ಮುಗಿದು ಬರುತ್ತಿದ್ದಂತೆ ಕೆಲ ಕ್ಷಣ ವ್ಯಾಪಾರ ಮಾಡುವುದನ್ನು ನಿಲ್ಲಿಸಿದ ವ್ಯಾಪಾರಿಗಳು ಪ್ರತಿಯಾಗಿ ನಮಸ್ಕಾರ ಮಾಡಿದರು.
ಈ ವೇಳೆ ಮಹಿಳೆಯೊಬ್ಬರು ಬೂದುಗುಂಬಳ ಕಾಯಿಯಿಂದ ದೃಷ್ಟಿ ತೆಗೆದು ಆಶೀರ್ವಾದ ಮಾಡಿದರು. ನಂತರ, ಮಡಿಕೇರಿ, ವಿರಾಜಪೇಟೆ ಪಟ್ಟಣದಲ್ಲಿ ರೋಡ್‌ಶೋ ನಡೆಸಿ ಮೈಸೂರಿಗೆ ಆಗಮಿಸಿದ ಯದುವೀರ್ ನರಸಿಂಹರಾಜ ಕ್ಷೇತ್ರದ ಹಲವು ಬಡಾವಣೆಗಳಲ್ಲಿ ಭರದಿಂದ ರೋಡ್ ಶೋ ನಡೆಸಿದರು.
ಲಿಂಗಾಯತರ ಬೀದಿಯಲ್ಲಿ ಪೂರ್ಣಕುಂಭ ಸ್ವಾಗತ ನೀಡಿ ಆರತಿ ಬೆಳಗಲಾಯಿತು. ನಂತರ ೧೦೦೮ ಗಣಪತಿ ದೇವಸ್ಥಾನ ಮಾರ್ಗ, ಒಡಿ ಬ್ಲಾಕ್, ಶಿವಾಜಿ ಮುಖ್ಯರಸ್ತೆಯ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಉದಯಗಿರಿ ಗಣಪತಿ ದೇವಸ್ಥಾನದ ಮಾರ್ಗಗಳಲ್ಲಿ ಮತಯಾಚಿಸಿದರು.
ನಂತರ ಕೆ.ಎನ್.ಪುರದಲ್ಲಿ ಯದುವೀರ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ವಾಲ್ಮೀಕಿ ಪುತ್ತಳಿ, ಕತ್ತಿ, ಗುರಾಣಿಯನ್ನು ನೀಡಿ ಸನ್ಮಾನಿಸಲಾಯಿತು. ಕ್ಯಾತಮಾರನಹಳ್ಳಿಯ ಪ್ರತಿಯೊಂದು ಬೀದಿಗಳಲ್ಲಿ ಪುಷ್ಪವೃಷ್ಟಿಗರೆಯಲಾಯಿತು.