ಮೈಸೂರು: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂದು ಕುರುಬ ಸಮುದಾಯದ ಸ್ವಾಮೀಜಿ ದೊಡ್ಡ ಘರ್ಜನೆ ಮಾಡಿರಲಿಲ್ಲವೇ ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರ ಅನುಭವಿಸಿದ್ದಾರೆ. ಇನ್ನು ಮುಂದೆ ಡಿಕೆಶಿ ಅವರಿಗೆ ಅಧಿಕಾರ ಬಿಟ್ಟು ಕೊಟ್ಟು, ಒಳ್ಳೆಯದಾಗಲೆಂದು ಅರಸಬೇಕು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ನೀಡಿದ್ದರು.
ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಮನಸ್ಸು ಮಾಡಿದರೆ ಶಿವಕುಮಾರ್ ಸಿಎಂ ಆಗುತ್ತಾರೆ. ಈ ಹಿಂದೆ ಕಾಂಗ್ರೆಸ್ ವೀಕ್ ಆಗಿದ್ದಾಗ ಸಿದ್ದರಾಮಯ್ಯ ಸ್ಟ್ರಾಂಗ್ ಆಗಿದ್ದರು. ಸದ್ಯ ಕಾಂಗ್ರೆಸ್ ಹೈಕಮಾಂಡ್ ಶಕ್ತವಾಗಿದ್ದು, ಡಿಕೆಶಿ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದರು.
ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಅಥವಾ ಅವರ ಶಾಸಕರು ಯಾರೂ ಹೇಳಿಲ್ಲ. ಶಿವಕುಮಾರ್‌ಗೆ ಅವಕಾಶ ನೀಡುವಂತೆ ಒಕ್ಕಲಿಗ ಸ್ವಾಮೀಜಿ ಅಭಿಮಾನದಿಂದ ಮನವಿ ಮಾಡಿದ್ದಾರೆ. ಅಧಿಕಾರ ಹಂಚಿಕೆ ಬಗ್ಗೆ ಮಾಧ್ಯಮದಲ್ಲಿ ಬರುತ್ತಲೇ ಇರುತ್ತದೆ. ಅದರ ಆಧಾರದ ಮೇಲೆ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಅದು ದೊಡ್ಡ ಅಪರಾಧವಲ್ಲ ಎಂದರು.
ಅಧಿಕಾರವನ್ನು ಹೇಗೆ ಉಳಿಸಿಕೊಳ್ಳಬೇಕು ಎನ್ನುವುದು ಸುದೀರ್ಘ ರಾಜಕಾರಣ ಮಾಡಿರುವ ಸಿದ್ದರಾಮಯ್ಯ ಅವರಿಗೆ ಚೆನ್ನಾಗಿಯೇ ಕರಗತವಾಗಿದೆ. ಅಧಿಕಾರವನ್ನು ತಕ್ಷಣವೇ ಬಿಟ್ಟು ಬಿಡುತ್ತಾರೆ ಎಂದು ನಾನು ಹೇಳುವುದಿಲ್ಲ. ಬಹುಮತವಿರುವ ಈ ಸರ್ಕಾರವನ್ನು ನಾವು ಬೀಳಿಸುವ ಪ್ರಶ್ನೆಯೇ ಇಲ್ಲ. ಅವರ ಪಕ್ಷದಲ್ಲೇ ಆಂತರಿಕ ಕಚ್ಚಾಟ, ಭಿನ್ನಾಭಿಪ್ರಾಯ ಬಂದರೆ ಸರ್ಕಾರ ಬೀಳಬಹುದು ಎಂದರು.





