Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಅತಿವೃಷ್ಟಿಯಿಂದ ಯಾವುದೇ ಪ್ರಾಣ, ಆಸ್ತಿ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ: ಕೃಷ್ಣ ಬೈರೇಗೌಡ

ಮೈಸೂರು: ಪ್ರತಿಯೊಂದು ಜೀವ ಅಮೂಲ್ಯವಾಗಿದ್ದು ಅತಿವೃಷ್ಟಿಯಿಂದ ಯಾವುದೇ ಪ್ರಾಣ ಹಾಗೂ ಆಸ್ತಿ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹಾನಿಯನ್ನು ತಡೆಗಟ್ಟಲು ಅಧಿಕಾರಿಗಳು ಸಜ್ಜಾಗಬೇಕು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ತಿಳಿಸಿದರು.

ಅವರು ಇಂದು (ಜುಲೈ.2) ಪ್ರಾದೇಶಿಕ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೈಸೂರು ವಿಭಾಗದ ಕಂದಾಯ ಇಲಾಖೆಯ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ಮಳೆಯಿಂದ ಪ್ರಾಣ ಹಾಗೂ ಆಸ್ತಿ ಹಾನಿ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಇನ್ನೂ ಹೆಚ್ಚು ಮಳೆ ಆದರೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಗುರುತಿಸಿಕೊಂಡಿರಬೇಕು ಎಂದರು.

ಕಂದಾಯ ಇಲಾಖೆಯು ಮಾತೃ ಇಲಾಖೆಯಾಗಿದ್ದು, ಕಂದಾಯ ಇಲಾಖೆಯಲ್ಲಿ ಹೆಚ್ಚು ಹೆಚ್ಚು ಅರ್ಜಿಗಳು ವಿಲೇವಾರಿ ಆಗಿದ್ದರೂ ಸಹ ಹೆಚ್ಚು ಬಾಕಿ ಕಂದಾಯ ಇಲಾಖೆಯಲ್ಲಿಯೇ ಇವೆ. ಕಂದಾಯ ಇಲಾಖೆಯು ಕಾಲ ಕಾಲಕ್ಕೆ ಬರುವ ಹೊಸ ಹೊಸ ಯೋಜನೆಗಳ ಜಾರಿ ಜವಾಬ್ಧಾರಿ ಕಂದಾಯ ಇಲಾಖೆಯ ಮೇಲೆಯೇ ಬರುತ್ತದೆ. ಆದರೂ ಸಹ ಜನರು ಕಂದಾಯ ಇಲಾಖೆಯ ಮೇಲೆ ಹೆಚ್ಚುಅವಲಂಬಿತರಾಗಿರುತ್ತಾರೆ. ಜನರಿಗೆ ಸಕಾಲದಲ್ಲಿ ಕೆಲಸ ಮಾಡಿ ಅವರ ಸಮಸ್ಯೆಗಳನ್ನು ಬಗೆಹರಿಸುವುದು ನಮ್ಮ ಇಲಾಖೆಯ ಪ್ರಮುಖ ಜವಾಬ್ಧಾರಿ ಆಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಈ ಹಿಂದೆ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಿದ್ದರೆ ಈಗ ಕಾರ್ಯದ ಒತ್ತಡ ಹೆಚ್ಚಾಗುತ್ತಾ ಇರಲಿಲ್ಲ. ಕಾನೂನಿನ ಅಡಿಯಲ್ಲಿ ಸಮಾಜದ ಸಾರ್ವಜನಿಕರ ಹಿತದೃಷ್ಟಿಯಿಂದ ಮಾಡಬೇಕಾದ ಕಾರ್ಯಗಳೇ ಆಗಿವೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ 24 ಲಕ್ಷ ಮಲ್ಟಿ ಓನರ್ ಆರ್ ಟಿ ಸಿ ಗಳು ಇವೆ. ಇದರಲ್ಲಿ 2 ಲಕ್ಷ ಸರ್ಕಾರದ ಸ್ವತ್ತಿನ ಮಲ್ಟಿ ಓನರ್ ಆರ್.ಟಿ. ಸಿ ಗಳು ಇವೆ. ಇವನ್ನೂ ಈ ಹಿಂದೆಯಿಂದಲೂ ಬಗೆಹರಿಸದೆ ಹಾಗೆ ಬಿಟ್ಟುಕೊಂಡು ಬಂದಿದ್ದೇವೆ. 50 ಲಕ್ಷ ಪ್ಲಾಟ್ ಗಳು ಕೃಷಿಯಿಂದ ಬೇರೆ ಉದ್ದೇಶಕ್ಕೆ ಕನ್ವರ್ಟ್ ಆಗಿದೆ ಆದರೆ ದಾಖಲೆಗಳಲ್ಲಿ ಈಗಲೂ ಕೃಷಿ ಭೂಮಿ ಎಂದು ಇದೆ. ಇದು ಕಾಲ ಕಾಲಕ್ಕೆ ಬದಲಾವಣೆ ಆಗಿದ್ದರೆ ಈಗ ಒತ್ತಡ ಆಗುತ್ತಿರಲಿಲ್ಲ. ಆದ್ದರಿಂದ ಇದು ನಮ್ಮ ಜವಾಬ್ದಾರಿ ಆಗಿದ್ದು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಿ ಎಂದು ಸೂಚಿಸಿದರು.

ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆ ಆಗುತ್ತದೆ. ಈಗಾಗಲೇ ಮಳೆಯಿಂದ 20 ಸಾವು ಸಂಬಂಧಿಸಿದೆ. ವಿಪತ್ತು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಿ ಸಾವು ನೋವು ಆಗದಂತೆ ನೋಡಿಕೊಳ್ಳಬೇಕು. ಕಳೆದ ಬಾರಿ ಬರ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಿದ್ದೀರಿ. ಹಾಗೆಯೇ ಈಗ ಹೆಚ್ಚು ಮಳೆಯಿಂದ ಆಗುವ ಅನಾಹುತಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ. ಇನ್ನೂ ಮುಂದೆ ವಿಪತ್ತಿನಿಂದ ಒಂದೇ ಒಂದು ಸಾವು ಆಗದಂತೆ ನೋಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

1,763 ಗ್ರಾಮಗಳನ್ನು ಸಮಸ್ಯೆ ಕಂಡು ಬರುವ ಗ್ರಾಮಗಳು ಎಂದು ಗುರುತಿಸಲಾಗಿದೆ. ಇಲ್ಲಿ
ಅತಿವೃಷ್ಟಿಯಿಂದ ಆಗುವ ಅನಾಹುತಗಳನ್ನು ತಡೆಯಲು ವೆಲ್ನೆರಬಲ್ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಪಂಚಾಯತಿಗಳ ಹಂತದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್ ಫೋರ್ಸ್ ತಂಡಗಳನ್ನು ರಚಿಸಬೇಕು. ಈ ತಂಡದಲ್ಲಿ ಅಗ್ನಿಶಾಮಕ ಅಧಿಕಾರಿಗಳು, ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಕಂದಾಯ ಇಲಾಖೆಯ ಅಧಿಕಾರಿಗಳು ಇರಬೇಕು. ಈ ತಂಡಗಳು ಅತಿವೃಷ್ಟಿಯಿಂದ ತೊಂದರೆ ಆಗುವ ವಲ್ನರಬಲ್ ಸ್ಥಳಗಳನ್ನು ಗುರುತಿಸಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ವಿವಿಧ ಹಳ್ಳಿಗಳಿಗೆ ತೆರಳಲು ಕಾಲು ಸಂಕಗಳನ್ನು ಬಳಕೆ ಮಾಡುತ್ತಾರೆ. ಅಪಾಯದ ಸ್ಥಿತಿಯಲ್ಲಿ ಇರುವ ಕಾಲು ಸಂಕಗಳನ್ನು ಅಬಿವೃದ್ಧಿ ಮಾಡಲು ಕ್ರಿಯಾ ಯೋಜನೆಯನ್ನು ತಯಾರಿಸಿ ನರೇಗಾ ಯೋಜನೆಯಡಿ ದುರಸ್ಥಿ ಮಾಡಿಸಿ. ಅಪಾಯಕಾರಿ ಹಳ್ಳ, ತೊರೆಗಳ ಬಳಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯದಲ್ಲಿ ಶೇಕಡಾ 15 ರಷ್ಟು ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗಳು ಮಾತ್ರ ಖಾಲಿ ಇವೆ. ಗ್ರಾಮ ಆಡಳಿತಾಧಿಕಾರಿ ಗಳು ವಿವಿದೆಡೆ ನಿಯೋಜನೆಯ ಮೇಲೆ ಇದ್ದರೆ ಅವರನ್ನು ಮೂಲ ಹುದ್ದೆಗಳಿಗೆ ಜಿಲ್ಲಾಧಿಕಾರಿಗಳು ಕರೆಸಿಕೊಳ್ಳಿ. ಗ್ರಾಮ ಆಡಳಿತಾಧಿಕಾರಿಗಳನ್ನು ಅವರ ಮೂಲ ಕರ್ತವ್ಯಕ್ಕೆ ಕಳುಹಿಸಿ. ಈಗಾಗಲೇ 1000 ಗ್ರಾಮ ಆಡಳಿತಾಧಿಕಾರಿಗಳ ಹೆದ್ದೆಗೆ ಅಧಿಸೂಚನೆ ಹೊರಡಿಸಿದ್ದು ನೇಮಕಾತಿ ಹಂತದಲ್ಲಿ ಇದೆ. 1000 ಹುದ್ದೆಗಳ ಭರ್ತಿಯಿಂದ ಹುದ್ದೆಗಳ ಕೊರತೆ ನೀಗಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 4 ಕೋಟಿ ಆರ್‌ಟಿಸಿ ಯಲ್ಲಿ 2 ಕೋಟಿ ಆರ್‌ಟಿಸಿ ಗಳ ಪರಿಶೀಲನೆ ಆಗಿದೆ. ಆರ್‌ಟಿಸಿ ಗಳಿಗೆ ಆಧಾರ್ ಅಥೆಂಟಿಕೇಶನ್ ಆಗಬೇಕು. ಇದರಿಂದ ಡೂಪ್ಲಿಕೇಟ್ ಸೇಲ್ ಅನ್ನು ನಿಯಂತ್ರಣ ಮಾಡಲು ಅನುಕೂಲವಾಗುತ್ತದೆ ಎಂದರು.

ಲಾಂಡ್ ಬೀಟ್ ಆ್ಯಪ್ ನಲ್ಲಿ ರಾಜ್ಯದಲ್ಲಿ ಇರುವ ಸರ್ಕಾರಿ ಆಸ್ತಿಗಳನ್ನು ಅಪ್ಲೋಡ್ ಮಾಡಬೇಕು. ಜುಲೈ ಅಂತ್ಯದ ಒಳಗೆ ಪ್ರತಿ ಗ್ರಾಮದಲ್ಲಿ ಇರುವ ಸರ್ಕಾರಿ ಆಸ್ತಿಗಳ ಮಾಹಿತಿಯನ್ನು ಪ್ರತಿ ಗ್ರಾಮಪಂಚಾಯತ್ ಗಳ ಬೋರ್ಡ್ ಗಳಲ್ಲಿ ಹಾಗೂ ನಮ್ಮ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕು. ಸಾರ್ವಜನಿಕರು ಈ ಆಸ್ತಿಗಳ ಪಾರದರ್ಶಕವಾಗಿ ನೋಡುವಂತೆ ಆಗಬೇಕು. ಈಗಾಗಲೇ ಶೇಕಡಾ 65 ರಷ್ಟು ಲ್ಯಾಂಡ್ ಬೀಟ್ ವೇರಿಫಿಕೇಶನ್ ಆಗಿದೆ ಉಳಿದ ಶೇಕಡಾ 35 ರಷ್ಟು ವೇರಿಫಿಕೇಷನ್ ಆಗಬೇಕು ಎಂದು ತಿಳಿಸಿದರು.

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಳಾದ ರಾಜೇಂದ್ರ ಕುಮಾರ್ ಕಟಾರಿಯಾ ಅವರು ಮಾತನಾಡಿ ಸರ್ಕಾರದ ವಿವಿಧ ಉದ್ದೇಶಗಳಿಗೆ ಕಾಯ್ದಿರಿಸಿರುವ ಭೂಮಿಯನ್ನು ಗುರುತಿಸಿ ಸಂರಕ್ಷಣೆ ಮಾಡಬೇಕು. ಕಂದಾಯ ಇಲಾಖೆಗಳ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಬೇಕು. ಜಿಲ್ಲಾಧಿಕಾರಿಗಳ ಹಾಗೂ ತಹಶೀಲ್ದಾರ್ ಅವರ ನ್ಯಾಯಾಲಯದಲ್ಲಿ ಇರುವ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು. ಈ ನ್ಯಾಯಾಲಯದಲ್ಲಿ ತೀರ್ಪು ನೀಡುವಾಗ ಯಾವ ಕಾಯ್ದೆಯಡಿ ತೀರ್ಪು ನೀಡಲಾಗಿದೆ ಎಂದು ಸ್ಪಷ್ಟವಾಗಿ ನಮೂದಿಸಬೇಕು. ವಿಲೇವಾರಿ ಅದ ಪ್ರಕರಣಗಳ ಕುರಿತು ಕಂದಾಯ ಇಲಾಖೆಯ ಸಾಫ್ಟವೇರ್ ನಲ್ಲಿ ಅಪ್ಲೋಡ್ ಮಾಡಬೇಕು ಎಂದು ತಿಳಿಸಿದರು.

ವಿಪತ್ತು ನಿರ್ವಹಣೆ ಯ ಪ್ರದಾನ ಕಾರ್ಯದರ್ಶಿಗಳಾದ ರಶ್ಮಿ ಮಹೇಶ್ ಅವರು ಮಾತನಾಡಿ ಈ ಬಾರಿ ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ ಹಾಗೂ ಆಗಸ್ಟ್ ಮಾಹೆಯಲ್ಲಿ ಹೆಚ್ಚು ಮಳೆಯಾಗುವ ಸಂಭವವಿದೆ. ಈ ಸಂಧರ್ಭದಲ್ಲಿ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡ್ಡ ಕುಸಿತ ಹಾಗೂ ಭೂ ಕುಸಿತ ಕಂಡುಬರುವ ಸಾಧ್ಯತೆ ಇದೆ. ಈ ಸಂಬಂಧ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ. ಅಗತ್ಯ ನಿರಾಶ್ರಿತ ಕೇಂದ್ರಗಳು ಹಾಗೂ ಗಂಜಿ ಕೇಂದ್ರಗಳನ್ನು ತೆರೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅತಿವೃಷ್ಟಿಯಿಂದ ಆಗಿರುವ ಪ್ರಾಣ ಹಾನಿ, ಜಾನುವಾರು ಸಾವು ಹಾಗೂ ಬೆಳೆ ಹನಿಗೆ ಎಸ್.ಡಿ‌.ಆರ್.ಎಫ್ ನಿಯಮಾವಳಿಗಳ ಅನ್ವಯ ಪರಿಹಾರವನ್ನು ಸಕಾಲದಲ್ಲಿ ಫಲಾನುಭವಿಗಳಿಗೆ ಪಾವತಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಮೈಸೂರು ವಿಭಾಗದ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags: