ಕೆ.ಆರ್.ನಗರ : ಪಟ್ಟಣದ ಎ.ಪಿ.ಎಂ.ಸಿ ಆವರಣದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಭತ್ತ ಮತ್ತು ರಾಗಿ ಕೇಂದ್ರವನ್ನು ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು.
ಪ್ರತಿ ಕ್ವಿಂಟಲ್ ಸಾಮಾನ್ಯ ಭತ್ತಕ್ಕೆ 2,300, ಗ್ರೇಡ್-ಎ 2,320ರೂ.ಗಳನ್ನುನಿಗದಿ ಮಾಡಲಾಗಿದ್ದು, ಪ್ರತಿ ಎಕರೆಗೆ ಕನಿಷ್ಠ 25 ರಿಂದ 50 ಕ್ವಿಂಟಲ್ ವರೆಗೆ ಖರೀದಿ ಮಾಡಲಾಗುತ್ತಿದೆ. ಇನ್ನೂ ಕ್ವಿಂಟಲ್ ರಾಗಿಗೆ 4,290 ನಂತೆ 10 ಕ್ವಿಂಟಲ್‌ನಿಂದ 20ರವರೆಗೆ ಖರೀದಿ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಮಾಹಿತಿ ನೀಡಿದರು.
ಸರ್ಕಾರ ರಾಗಿ ಮತ್ತು ಭತ್ತ ಸೇರಿದಂತೆ ಇತರ ಬೆಳೆ ಗಳಿಗೆ ಬೆಂಬಲ ಬೆಲೆ ಘೋಷಿಸಿ ಸರ್ಕಾರವೇ ರೈತ ರಿಂದ ನೇರವಾಗಿ ಖರೀದಿ ಮಾಡುತ್ತಿದ್ದು, ಎಲ್ಲ ರೈತ ಬಾಂಧವರು ಇದನ್ನು ಸದುಪಯೋಗಪಡಿಸಿಕೊಳ್ಳ ಬೇಕು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.
ಕೆ ಆರ್ ನಗರ, ಸಾಲಿಗ್ರಾಮ ಮತ್ತು ಚುಂಚನಕಟ್ಟೆಯಲ್ಲಿ ಖರೀದಿ ಕೇಂದ್ರ ತೆರೆಯಲಾಗಿದ್ದು, ರೈತರು ನೇರವಾಗಿ ಖರೀದಿ ಕೇಂದ್ರಕ್ಕೆ ಭತ್ತ ಮತ್ತು ರಾಗಿ ಸರಬರಾಜು ಮಾಡಿ ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಖರೀದಿ ಕೇಂದ್ರದಲ್ಲಿ ಪಡೆದ ರಾಗಿಯನ್ನು ನೇರವಾಗಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರದಾರರಿಗೆ ವಿತರಿಸುವುದರಿಂದ ಗುಣಮಟ್ಟದ ರಾಗಿಯನ್ನು ಖರೀದಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಅವರು, ಈ ಬಾರಿ ಬೆಳೆದಂತಹ ರಾಗಿಯನ್ನು ಮಾತ್ರ ಪಡೆಯಬೇಕು ಹಣದ ಆಸೆ ಗಾಗಿ ಮಧ್ಯವರ್ತಿಗಳಿಗೆ ಆದ್ಯತೆ ನೀಡಿದ್ದು ಮತ್ತು ಹಳೆ ರಾಗಿ ಖರೀದಿ ಮಾಡಿರುವುದು ಕಂಡು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ತಲೆದಂಡವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಪುರಸಭೆ ಅಧ್ಯಕ್ಷ ಶಿವುನಾಯಕ್, ಸದಸ್ಯ ಕೋಳಿ ಪ್ರಕಾಶ್, ಸೈಯದ್ ಸಿದ್ದಿಕ್, ಮಾಜಿ ಪುರಸಭಾ ಅಧ್ಯಕ್ಷ ನರಸಿಂಹರಾಜು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡ ಮಹೇಶ್, ಪುರಸಭಾ ಮಾಜಿ ಸದಸ್ಯ ಕೆ. ವಿನಯ್, ಎಪಿಎಂಸಿ ಮಾಜಿ ನಿರ್ದೇಶಕರಾದ ಹಂಪಾಪುರ ಪ್ರಶಾಂತ್, ಹೆಬ್ಬಾಳು ನಾಗೇಂದ್ರ, ಕೆ.ಆರ್. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಹಾದೇವ್, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಕಾಂಗ್ರೆಸ್ ವಕ್ತಾರ ಸೈಯದ್ ಜಬೀರ್, ರೈತ ಮುಖಂಡ ಕುಮಾರ್ ಹಾಗೂ ಮತ್ತಿತರರು ಇದ್ದರು.





