ಹುಣಸೂರು: ಇಲ್ಲಿನ ಜ್ಯುವೆಲ್ಲರಿ ಶಾಪ್‌ನಲ್ಲಿ ಚಿನ್ನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿಯೊಂದು ಲಭ್ಯವಾಗಿದ್ದು, ದರೋಡೆಕೋರರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ದರೋಡೆಕೋರರು 7 ಗನ್ ಬಳಸಿ, ಕೇವಲ 4 ನಿಮಿಷದಲ್ಲೇ ಕೆಜಿಗಟ್ಟಲೇ ಚಿನ್ನ ದೋಚಿ ಪರಾರಿಯಾಗಿದ್ದಾರೆ.
ಭಾನುವಾರ ಮಧ್ಯಾಹ್ನ 2 ಗಂಟೆ 4 ನಿಮಿಷಕ್ಕೆ ಚಿನ್ನದ ಅಂಗಡಿಗೆ ನುಗ್ಗಿದ್ದ ದರೋಡೆಕೋರರು 2 ಗಂಟೆ 8 ನಿಮಿಷಕ್ಕೆ ಪರಾರಿಯಾಗಿದ್ದಾರೆ.
ಚಿನ್ನ ತೆಗೆದುಕೊಂಡು ಹೋಗಲು ಮೊದಲೇ ಎರಡು ಚೀಲವನ್ನು ತಂದಿದ್ದ ದರೋಡೆಕೋರರು, ಶೋಕೆಸ್‌ನಲ್ಲಿದ್ದ ದೊಡ್ಡ ದೊಡ್ಡ ಗಾತ್ರದ ಚಿನ್ನಾಭರಣವನ್ನು ಒಂದು ಕಡೆ ಗುಡ್ಡೆ ಹಾಕಿದ್ದರು.
ಒಬ್ಬ ಚಿನ್ನ ಗುಡ್ಡೆ ಹಾಕುತ್ತಿದ್ದ, ಮತ್ತೊಬ್ಬ ಗನ್ ಹಿಡಿದು ಸಿಬ್ಬಂದಿಯನ್ನು ಬೆದರಿಸುತ್ತಿದ್ದ, ಇನ್ನೊಬ್ಬ ಬಾಗಿಲ ಬಳಿ ನಿಂತಿದ್ದ. ಉಳಿದ ಇಬ್ಬರು ಹೊರಗಡೆ ದ್ವಿಚಕರ ವಾಹನ ಸ್ಟಾರ್ಟ್ ಮಾಡಿಕೊಂಡು ನಿಂತಿದ್ದರು.
ದರೋಡೆಯ ದೃಶ್ಯ ಶಾಪ್‌ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಒಂದು ಬೈಕ್‌ನಲ್ಲಿ ಇಬ್ಬರು, ಮತ್ತೊಂದು ಬೈಕ್‌ನಲ್ಲಿ ಮೂವರು ಹುಣಸೂರಿನಿಂದ ಕೆ.ಆರ್.ನಗರಕ್ಕೆ ಬೈಪಾಸ್ ರಸ್ತೆಯ ಮೂಲಕ ಹೋಗುತ್ತಿರುವ ವಿಡಿಯೋ ಸೆರೆಯಾಗಿದೆ.
ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದು, ತನಿಖೆ ಮುಂದುವರಿಸಿದ್ದಾರೆ.





