Mysore
20
overcast clouds
Light
Dark

ಗೀತಾ ಶಿವಣ್ಣ ಓಕೆ, ಗೀತಾ ಬಂಗಾರಪ್ಪ ಓಕೆ.. ರಾಜ್‌ಕುಮಾರ್‌ ಯಾಕೆ? ಕೌಟಿಲ್ಯ ರಘು ಕಿಡಿ

ಮೈಸೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಈಗಾಗಲೇ ಟಿಕೆಟ್‌ ಪಡೆದಿರುವ ಅಭ್ಯರ್ಥಿಗಳು ಮತದಾರರ ಮನ ಸೆಳೆಯಲು ತಾಲೀಮು ನಡೆಸುತ್ತಿದ್ದಾರೆ. ಇನ್ನು ಈ ಬಾರಿ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೀತಾ ಶಿವರಾಜ್‌ಕುಮಾರ್‌ ಕಣಕ್ಕಿಳಿಯುತ್ತಿದ್ದಾರೆ. ಈ ಬಗ್ಗೆ ರಾಜ್ಯ ಬಿಜೆಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷ ಕೌಟಿಲ್ಯ ರಘು ಪ್ರತಿಕ್ರಿಯಿಸಿದ್ದು ಚುನಾವಣೆಗಾಗಿ ರಾಜ್‌ಕುಮಾರ್‌ ಹೆಸರು ಬಳಕೆಯಾಗಬಾರದು ಎಂದು ಹೇಳಿಕೆ ನೀಡಿದ್ದಾರೆ.

ನ್ಯೂಸ್‌ ಒನ್‌ ಚಾನೆಲ್‌ ಜತೆ ಮಾತನಾಡಿರುವ ಕೌಟಿಲ್ಯ ರಘು ತಾನೊಬ್ಬ ರಾಜ್‌ಕುಮಾರ್‌ ಕಟ್ಟಾಭಿಮಾನಿ ಎಂಬುದು ಬಹುತೇಕರಿಗೆ ತಿಳಿದಿದೆ. ರಾಜಕೀಯದಿಂದ ಬಹುದೊಡ್ಡ ಅಂತರ ಕಾಯ್ದುಕೊಂಡ ರಾಜ್‌ಕುಮಾರ್ ಸಿನಿಮಾಗಳಲ್ಲಿಯೂ ಸಹ ಅದನ್ನು ಅಳವಡಿಸಿಕೊಳ್ಳದೇ ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ, ಸಾಂಸ್ಕೃತಿಕವಾಗಿ ಕ್ರಾಂತಿಯನ್ನು ಮಾಡಿದ್ದರು.

ಅಂತಹ ಕುಟುಂಬಸ್ಥರಾಗಿ ಶಿವಣ್ಣ ಅವರು ಅವರ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿದ್ದಾರೆ. ಅದಕ್ಕೆ ಯಾರ ಆಕ್ಷೇಪವೂ ಇಲ್ಲ. ಅವರು ದೊಡ್ಮನೆ ಸೊಸೆ ಎಂದು ಬಿಂಬಿಸಿಕೊಂಡವರು. ಆದರೆ ಚುನಾವಣೆಗೆ ನಿಲ್ಲುವಂತಹ ಸಂದರ್ಭದಲ್ಲಿ ಅವರು ಬಂಗಾರಪ್ಪನವರ ಪುತ್ರಿ ಅಥವಾ ಶಿವಣ್ಣನವರ ಪತ್ನಿ ಎಂದು ಹೇಳಿಕೊಂಡು ಪ್ರಚಾರ ಮಾಡಬೇಕು ಎಂಬುವುದು ನನ್ನ ನೇರ ಒತ್ತಾಯ ಮತ್ತು ಆಗ್ರಹ. ಏಕೆಂದರೆ ಶಿವಣ್ಣ ಓಕೆ, ಚುನಾವಣೆಯಲ್ಲಿ ರಾಜ್‌ಕುಮಾರ್‌ ಯಾಕೆ? ಗೀತಾ ಶಿವಣ್ಣ ಓಕೆ, ಗೀತಾ ಬಂಗಾರಪ್ಪ ಓಕೆ, ರಾಜ್‌ಕುಮಾರ್‌ ಯಾಕೆ? ರಾಜ್‌ಕುಮಾರ್‌ಗೂ ರಾಜಕೀಯಕ್ಕೂ ಸಂಬಂಧ ಇಲ್ಲ.

ರಾಜ್‌ಕುಮಾರ್‌ರವರಿಗೆ ಸಂಬಂಧ ಇರುವುದು ಕನ್ನಡಿಗರು, ಕನ್ನಡ, ನಾಡು, ನುಡಿ, ಜನ. ಇದನ್ನು ಹೊರತುಪಡಿಸಿ ರಾಜಕೀಯ ಯಾವುದೇ ಕಾರಣಕ್ಕೂ ಹತ್ತಿರ ಸೇರಿಸಿದವರಲ್ಲ. ಹೀಗಾಗಿ ಕೋಟ್ಯಂತರ ರಾಜ್‌ಕುಮಾರ್‌ ಅಭಿಮಾನಿಗಳ ಮನಸ್ಸನ್ನು ಘಾಸಿ ಮಾಡಬೇಡಿ, ನಿಮ್ಮ ರಾಜಕೀಯ ವ್ಯಾಪಾರ ಮಾಡಿಕೊಳ್ಳಿ, ಅದಕ್ಕೆ ನಮ್ಮ ತಕರಾರಿಲ್ಲ ಎಂದರು. ಅಲ್ಲದೇ ಈ ಕುರಿತಾಗಿ ಚುನಾವಣೆ ನೀತಿಸಂಹಿತೆ ಮುಗಿಯುವವರೆಗೂ ಶಿವಣ್ಣ ಅವರ ಯಾವುದೇ ಚಲನಚಿತ್ರಗಳನ್ನು, ಜಾಹೀರಾತುಗಳನ್ನು ಮಾಧ್ಯಮಗಳಲ್ಲಾಗಲಿ, ಪತ್ರಿಕೆಗಳಲ್ಲಾಗಲಿ, ಚಿತ್ರಮಂದಿರಗಳಲ್ಲಾಗಲಿ ಪ್ರಸಾರ ಆಗಬಾರದು ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇನೆ ಎಂದೂ ಸಹ ಕೌಟಿಲ್ಯ ರಘು ತಿಳಿಸಿದರು.