ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ೨೦೨೫-೨೬ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಮೇಲೆ ರೈತ ಸಂಘ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಅವೆಲ್ಲಾ ಹುಸಿಯಾಗಿದೆ. ಸಿಎಂ ಸಿದ್ದರಾಮಯ್ಯ ಅವರು ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ರೈತ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ಬಜೆಟ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಭಾಗ್ಯರಾಜು, ಬಜೆಟ್ ನಲ್ಲಿ ರಾಜ್ಯ ಸರ್ಕಾರ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ರೈತರ ಅಭಿವೃದ್ಧಿ ಬಗ್ಗೆ ಮಾತನಾಡುವ ಸರ್ಕಾರ ಕೃಷಿ ಪತ್ತಿನ ಸಹಕಾರ ಸಂಘದ ಸಾಲ ಮನ್ನ ವಿಚಾರ ಬಜೆಟ್ ನಲ್ಲಿ ಪ್ರಸ್ತಾಪ ಇಲ್ಲ. ಕಾರ್ಖಾನೆಗಳಿಂದ ಕಬ್ಬಿನ ಬಾಕಿ ಹಣದ ಪ್ರಸ್ತಾಪವೂ ಇಲ್ಲ ಎಂದರು.
ರೈತರ ಬೆಳೆ ಸಂರಕ್ಷಣೆ ವಿಚಾರದಲ್ಲಿ ಸ್ಟೋರೇಜ್ ವಿಚಾರ ಕೂಡ ಪ್ರಸ್ತಾಪವಿಲ್ಲ. ಎಪಿಎಂಸಿ ತಿದ್ದಪಡಿ ಕಾಯ್ದೆ ಬಗ್ಗೆ ಕೂಡ ಮಾತನಾಡಿಲ್ಲ. ರೈತರ ಅಭಿವೃದ್ಧಿಗೆ ಬಜೆಟ್ ನಲ್ಲಿ ಯಾವುದೆ ವೈಜ್ಞಾನಿಕ ಮಾನದಂಡ ಅನುಸರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.





