ಮೈಸೂರು: ಭಾರತೀಯ ಸಂಸ್ಕೃತಿ ಮತ್ತು ಕಲೆಯಲ್ಲಿ ಜೀವಮಾನ ಸಾಧನೆಗಾಗಿ ಮಧ್ಯಪ್ರದೇಶ ಸರ್ಕಾರದಿಂದ ಪ್ರತಿ ವರ್ಷ ಕೊಡಮಾಡುವ ʼಕಾಳಿದಾಸ ಸಮ್ಮಾನ್ʼ ಪ್ರಶಸ್ತಿಗೆ ಈ ಬಾರಿ ಮೈಸೂರಿನ ಗಂಜೀಫಾ ರಘುಪತಿ ಭಟ್ಟ ಅವರು ಭಾಜನರಾಗಿದ್ದಾರೆ.
ಈ ಪ್ರಶಸ್ತಿ ಪ್ರಧಾನ ಸಮಾರಂಭವೂ ನವೆಂಬರ್ 12 ರಂದು ಉಜ್ಜಯಿನಿಯಲ್ಲಿ ನಡೆಯಲಿದೆ. ಪ್ರಶಸ್ತಿಯು ಐದು ಲಕ್ಷ ರೂ. ನಗದು ಬಹುಮಾನ, ಶಾಲು ಹಾಗೂ ಶ್ರೀಫಲಕವನ್ನು ನೀಡಿ ಗೌರವಿಸಲಾಗುತ್ತದೆ.
ರಘುಪತಿ ಭಟ್ಟ ಅವರ ಹಿನ್ನೆಲೆ
ರಘುಪತಿ ಭಟ್ಟ ಅವರು 1957 ರಲ್ಲಿ ದಕ್ಷಿಣ ಕನ್ನಡದಲ್ಲಿ ಜನಿಸಿದರು. ಭಾರತೀಯ ಶಾಸ್ತ್ರೀಯ ಚಿತ್ರಕಲೆಯಲ್ಲಿ 50 ವರ್ಷದಿಂದ ತೊಡಗಿಸಿಕೊಂಡಿದ್ದಾರೆ. ಭಟ್ಟ ಅವರು ಮೈಸೂರಿನ ಲಕ್ಷಣ ಶಾಸ್ತ್ರದ ಅನ್ವಯ ಚಿತ್ರ ರಚಿಸುವಲ್ಲಿ ಪರಿಣಿತರಾಗಿದ್ದಾರೆ. ಅಲ್ಲದೇ, ಗಂಜೀಫಾ ಚಿತ್ರಕಲೆ ಹಾಗೂ ಕರಾವಳಿ ಭಾಗದ ಕಾವಿ ಕಲೆಯೂ ಅಳಿವಿನಂಚಿನಲ್ಲಿದ್ದಾಗ ಈ ಕಲೆಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ಇನ್ನಷ್ಟು ಹೆಚ್ಚು ಪ್ರಸಿದ್ಧಿಯನ್ನು ಪಡೆದರು. ಭಟ್ಟರು ಕಾವಿ ಚಿತ್ರಕಲೆಯ ರಚನಾ ವಿಧಾನ ಕೃತಿಯನ್ನು ರಚಿಸಿದ್ದು, ಈ ಚಿತ್ರಕಲೆ ದೇಶ ವಿದೇಶಗಳಲ್ಲಿ ಪ್ರದರ್ಶನ ಕಂಡಿದೆ.