ನಂಜನಗೂಡು: ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಬಳಿಯಿರುವ ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕಾಶಿ ನಂಜನಗೂಡಿಗೆ ಜಲದಿಗ್ಭಂಧನ ಆವರಿಸಿದೆ.
ಕೇರಳದ ವಯನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಪರಿಣಾಮ ಕಪಿಲಾ ನದಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿವೆ.
ಇನ್ನೂ ದಕ್ಷಿಣ ಕಾಶಿ ನಂಜನಗೂಡಿನ ಹಳ್ಳದಕೇರಿಯು ಮುಳುಗಡೆಯಾಗಿದ್ದು, ಅದರಲ್ಲಿ ನಾಲ್ಕೈದು ಮನೆಗಳು ಪ್ರವಾಹದ ನೀರಿಗೆ ಸಿಲುಕಿ ಸಂಪೂರ್ಣ ಮುಳುಗಡೆಯಾಗಿವೆ.
ಮನೆಗಳು ಸಂಪೂರ್ಣ ಮುಳುಗಡೆಯಾಗಿರುವುದರಿಂದ ಮನೆ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದ್ದು, ಮನೆ ಮುಳುಗಡೆಯಾಗಿದ್ದರಿಂದ ಸಂತ್ರಸ್ತರು ಕಣ್ಣೀರು ಸುರಿಸುತ್ತಿದ್ದು, ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಮಳೆ ಹಿಗೇಯೇ ಮುಂದುವರಿದರೆ ಜಲಾಶಯದಿಂದ ಮತ್ತಷ್ಟು ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕಪಿಲಾ ನದಿ ತೀರದ ಜನರು ಮುನ್ನೆಚ್ಚರಿಕೆ ವಹಿಸಬೇಕಾಗಿ ನೀರಾವರಿ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.