ಎಚ್.ಡಿ.ಕೋಟೆ: ಕೇರಳದ ವಯನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.
ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿರುವ ಪರಿಣಾಮ ಕಬಿನಿ ಹಿನ್ನೀರಿನಲ್ಲಿ ಭಾರೀ ಅಲೆಗಳೇ ಸೃಷ್ಟಿಯಾಗಿವೆ. ಇದನ್ನು ನೋಡಲು ವೀಕೆಂಡ್‌ನಲ್ಲಿ ನೂರಾರು ಪ್ರವಾಸಿಗರು ಹಿನ್ನೀರು ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ.
ಪುಟ್ಟ ಪುಟ್ಟ ಮಕ್ಕಳ ಜೊತೆಗೂ ಕಬಿನಿ ಹಿನ್ನೀರು ಪ್ರದೇಶಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರು, ದಿನಪೂರ್ತಿ ಅಲ್ಲೆ ಮೋಜು ಮಸ್ತಿಗಳೊಂದಿಗೆ ಕಾಲ ಕಳೆದು ಖುಷಿಪಡುತ್ತಿದ್ದಾರೆ. ಕಬಿನಿ ಹಿನ್ನೀರು ಪ್ರದೇಶವಾದ ಭೀಮನಕೊಲ್ಲಿ ಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ನಿತ್ಯ ನೂರಾರು ಸಾರ್ವಜನಿಕರು ಹಿನ್ನೀರು ನೋಡಲೆಂದೇ ಭೇಟಿ ನೀಡುತ್ತಿದ್ದಾರೆ.
ಇನ್ನು ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿರುವ ಪರಿಣಾಮ ಜಲಾಶಯಕ್ಕೂ ವೀಕೆಂಡ್‌ನಲ್ಲಿ ಸಾವಿರಾರು ಪ್ರವಾಸಿಗರು ಭೇಟಿ ನೀಡಿ, ನೀರಿನ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ.
ವೀಕೆಂಡ್‌ನಲ್ಲಿ ಕಬಿನಿ ಜಲಾಶಯಕ್ಕೆ ಮತ್ತಷ್ಟು ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಜಲಾಶಯ ಹಾಗೂ ಕಬಿನಿ ಹಿನ್ನೀರು ಪ್ರದೇಶಗಳಲ್ಲಿ ಪೊಲೀಸರನ್ನು ಕೂಡ ನಿಯೋಜನೆ ಮಾಡಲಾಗಿದೆ.





