Mysore
18
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮೈಸೂರಿನಲ್ಲಿ ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ಬೃಹತ್‌ ಪ್ರತಿಭಟನೆ

ಮೈಸೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಖಂಡಿಸಿ ಜಿಲ್ಲಾ ಜೆಡಿಎಸ್ ವತಿಯಿಂದ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಬುಧುವಾರ ನೂತನ ಜಿಲ್ಲಾಧಿಕಾರಿ ಬಳಿ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಮತ್ತು ಮಾಜಿ ಸಚಿವ ಸಾ ರಾ ಮಹೇಶ್ ನೇತೃತ್ವದಲ್ಲಿ ಜಮಾಯಿಸಿದ ನೂರಾರು ಜೆಡಿಎಸ್‌ ಕಾರ್ಯಕರ್ತರು ಪೆನ್ ಡ್ರೈವ್ ಹಂಚಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವರ ಮೇಲೆ ಸೂಕ್ತ ಕ್ರಮಕ್ಕಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಹಾಸನ ಅಶ್ಲೀಲ ವಿಡಿಯೋ ಇರುವ ಪೆನ್‌ ಡ್ರೈವ್‌ ಹಂಚಿಕೆ ರೂವಾರಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಎಂದು ದಿಕ್ಕಾರದ ಘೋಷಣೆ ಕೂಗಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಪೆನ್‌ಡ್ರೈವ್‌ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮಾತನಾಡಿದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಶಾಸಕ ಜಿ ಟಿ ದೇವೇಗೌಡ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ‌ ವೀಡಿಯೋಗಳನ್ನು ಪೆನ್ ಡ್ರೈವ್ ಮೂಲಕ ಹಂಚಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಸಂತ್ರಸ್ತ ಮಹಿಳೆಯರಿಗೆ ‌ನ್ಯಾಯ ದೊರಕಿಸಿಕೊಡಬೇಕು. ಪೆನ್ ಡ್ರೈವ್  ಹಂಚಿಕೆಯಾಗಿರುವುದರ ಹಿಂದೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಕೈವಾಡವಿದೆ ಎಂದು ದೂರಿದ ಅವರು, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕುಟುಂಬಕ್ಕೆ ಕಳಂಕ ತರಲು ಈ ರೀತಿಯ ಷಡ್ಯಂತ್ರ ಮಾಡಲಾಗಿದೆ ಎಂದು ಆರೋಪಿಸಿದರು.ಮಾಜಿ ಸಚಿವ ಸಾ.ರಾ ಮಹೇಶ್ ಮಾತನಾಡಿ, ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಎಸ್ಐಟಿ ತಂಡದ ಕೆಲ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಕೈ ಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಅಧಿಕಾರಿಗಳು ಕಾನೂನಿನ ಅಡಿ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.

ಪ್ರಕರಣದ ಸಂತ್ರಸ್ತೆಯನ್ನ ಇಲ್ಲಿವರಗೆ ಯಾಕೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿಲ್ಲ.? ಯಾಕೆ ಇನ್ನೂ ಸ್ಥಳ ಮಹಜರು ಮಾಡಿಲ್ಲ ಎಂದು ಪ್ರಶ್ನಿಸಿದರು. ರಾಜಕೀಯ ದುರುದ್ದೇಶದಿಂದ ನಮ್ಮ ಪ್ರಾದೇಶಿಕ ಪಕ್ಷವನ್ನ ಮುಗಿಸುವ ಹುನ್ನಾರದಿಂದ ಸಿಎಂ ಹಾಗೂ ಡಿಸಿಎಂ ಎಸ್ಐಟಿ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಏನೂ ಮಾತನಾಡಲ್ಲ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ. ಆದರೆ ಪೆನ್ ಡ್ರೈವ್ ವನ್ನು ಹಂಚಿಕೆ ಮಾಡಿ ನೂರಾರು ಮಹಿಳೆಯರ ಮಾನ ಹಾರಾಜು ಹಾಕಿರುವುದು ಅಕ್ಷಮ್ಯ ಅಪರಾಧ. ಇದರ ಬಗ್ಗೆಯೂ ಕೂಡ ಸೂಕ್ತ ತನಿಖೆ ಆಗಬೇಕು. ಪ್ರಕರಣ ಪಿತಾಮಹ ಯಾರು ಎಂದು ಬಯಲಿಗೆ ಬರಬೇಕು. ಹಾಗಾಗಿ ಪೆನ್ ಡ್ರೈವ್ ಹಂಚಿಕೆ ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಪೆನ್‌ ಡ್ರೈವ್ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮೈಸೂರು ಜಿಲ್ಲಾ ಜೆಡಿಎಸ್‌ ಒತ್ತಾಯಿಸಿ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಅವರಿಗೆ ಸಲ್ಲಿಸಿದರು.

Tags:
error: Content is protected !!