ಮೈಸೂರು : ಪಕ್ಷ ಸಂಘಟನೆಗಾಗಿ ಯುವ ಜಾ.ದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಫೆ.18 ರಿಂದ ಫೆ.24ರ ವರೆಗೆ ಮೈಸೂರು ಜಿಲ್ಲೆಯ ವಿವಿಧೆಡೆ ‘ಜನರೊಂದಿಗೆ ಜನತಾದಳ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂಬ ದೃಷ್ಟಿಯಿಂದ ಈ ಸಮಾವೇಶವನ್ನು ನಡೆಸಲಾಗುತ್ತಿದೆ ಎಂದರು.
ಫೆ.18 ರಂದು ಬೆಳಿಗ್ಗೆ 11 ಗಂಟೆಗೆ ಮಾಜಿ ಶಾಸಕ ಮಹದೇವು ಅವರ ನೇತೃತ್ವದಲ್ಲಿ ಪಿರಿಯಾಪಟ್ಟಣದಲ್ಲಿ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಲಾಗಿದೆ. ಫೆ.22 ರಂದು ಕೆ.ಆರ್.ನಗರದ ರೇಡಿಯೋ ಮೈದಾನದಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಫೆ.24 ರಂದು ಮಾಜಿ ಶಾಸಕ ಅಶ್ವಿನ್‌ಕುಮಾರ್ ನೇತೃತ್ವದಲ್ಲಿ ತಿ.ನರಸೀಪುರ ತಾಲ್ಲೂಕಿನ ಬನ್ನೂರಿನಲ್ಲಿ ಸಂಜೆ 4 ಗಂಟೆಗೆ ಸಮಾವೇಶ ನಡೆಸಲಾಗುತ್ತಿದೆ. ಫೆ.25 ರಂದು ಬೆಳಿಗ್ಗೆ 11ಗಂಟೆಗೆ ಹುಣಸೂರಿನಲ್ಲಿ ಸಮಾವೇಶವನ್ನು ಆಯೋಜಿಸಲಾಗಿದೆ ಎಂದ ಅವರು, ಚಾಮುಂಡೇಶ್ವರಿ, ವರುಣ, ಚಾಮರಾಜ, ಕೃಷ್ಣರಾಜ ಕ್ಷೇತ್ರಗಳಲ್ಲಿ ನಡೆಸುವ ಸಮಾವೇಶದ ದಿನಾಂಕವನ್ನು ಇನ್ನೂ ಅಂತಿಮಗೊಳಿಸಬೇಕಿದೆ ಎಂದರು.
ಈ ಎಲ್ಲಾ ಸಮಾವೇಶಗಳಲ್ಲಿ ಜಾ.ದಳ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಜರಿರಲಿದ್ದಾರೆ. ಮೈಸೂರು ನಗರಾಧ್ಯಕ್ಷ ಎಸ್‌ಬಿಎಂ ಮಂಜು ಹಾಗೂ ಜಿಲ್ಲಾಧ್ಯಕ್ಷ ಅಶ್ವಿನ್ ಕುಮಾರ್ ಅವರುಗಳ ಸಾರಥ್ಯದಲ್ಲಿ ಈ ಕಾರ್ಯಕ್ರಮಗಳು ಜರುಗಲಿದ್ದು, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಜಾ.ದಳ ಅಭಿಮಾನಿಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ನೇಮಕ
ಜಿಲ್ಲೆಯಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ, ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕೆಲಸವನ್ನು ಎಚ್.ಡಿ.ಕುಮಾರಸ್ವಾಮಿ ಅವರು ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ತಾಲ್ಲೂಕು ಹಾಗೂ ನಗರ ಘಟಕಗಳಲ್ಲಿ ಕೆಲ ಬದಲಾವಣೆಯನ್ನು ಮಾಡಲು ನಿರ್ಧರಿಸಲಾಗಿದೆ. ಪಕ್ಷ ಸಂಘಟನೆಗೆ ಹೊಸಬರಿಗೂ ಅಧಿಕಾರ ನೀಡಲು ಉದ್ದೇಶಿಸಲಾಗಿದೆ ಎಂದರು.
ಜನರು ರೋಸಿಹೋಗಿದ್ದಾರೆ
ಕಾಂಗ್ರೆಸ್ ಪಕ್ಷದ ಆಡಳಿತ ವೈಖರಿಯಿಂದ ಜನರು ರೋಸಿಹೋಗಿದ್ದಾರೆ. ರಾಜ್ಯಸರ್ಕಾರ 7 ಲಕ್ಷ ಕೋಟಿ ರೂ. ಸಾಲದ ಹೊರೆಯನ್ನು ಜನರ ಮೇಲೆ ಹೊರಿಸಿದೆ. ಎಲ್ಲಾ ಬೆಲೆಗಳೂ ಗಗನಕ್ಕೇರಿವೆ. ಈ ಉದ್ದೇಶದಿಂದ ಜನರು ಕಾಂಗ್ರೆಸ್‌ಗೆ ಪಾಠ ಕಲಿಸಲು ಮುಂದಿನ ಚುನಾವಣೆಯನ್ನು ಎದುರು ನೋಡುತ್ತಿದ್ದಾರೆ ಎಂದರು.
ಪ್ರವಾಸದ ನೆಪದಲ್ಲಿ ಸಿದ್ದರಾಮಯ್ಯ ಅವರ ಬಣದ ಶಾಸಕರು ಹೋಗುತ್ತಿದ್ದಾರೆ. ಅಲ್ಲಿ ಏನು ನಡೆಯಬಹುದು ಎಂಬುದು ಗೊತ್ತಿಲ್ಲ. ಬಹುಶಃ ಅಲ್ಲಿ ಸೂಟ್‌ಕೇಸ್ ಕೈ ಬದಲಾಗಬಹುದು. ಮುಂದಿನ ದಿನಗಳಲ್ಲಿ ಈ ಬಗ್ಗೆ ತಿಳಿಯಲಿದೆ ಎಂದರು.
ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮಾಜಿ ಶಾಸಕ ಕೆ.ಮಹದೇವು, ಜಾ.ದಳ ಜಿಲ್ಲಾಧ್ಯಕ್ಷ ಅಶ್ವಿನ್‌ಕುಮಾರ್, ಮೈಸೂರು ನಗರಾಧ್ಯಕ್ಷ ಎಸ್‌ಬಿಎಂ ಮಂಜು,ಮಾಜಿ ಮಹಾಪೌರರಾದ ಎಂ.ಜೆ.ರವಿಕುಮಾರ್, ಆರ್.ಲಿಂಗಪ್ಪ, ಭಾಗ್ಯ, ರಮೇಶ್, ಅಭಿಷೇಕ್, ಜಿಪಂ ಮಾಜಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್, ಅಮ್ಮ ಸಂತೋಷ್ ಮುಂತಾದವರು ಹಾಜರಿದ್ದರು.





