ಮೈಸೂರು: ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕಪಿಲಾ ತೀರದ ತಟದಲ್ಲಿರುವ ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಜನವರಿ.31ರವರೆಗೆ ನಡೆಯುವ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಸಹಸ್ರಾರು ಜನರು ಭಾಗಿಯಾಗಲಿದ್ದಾರೆ. ಇಂದು ಸಾಮೂಹಿಕ ವಿವಾಹ, ರಾಜ್ಯಮಟ್ಟದ ಭಜನಾಮೇಳ, ದೇಸಿ ಆಟಗಳು, ಸೋಬಾನೆಪದ, ರಂಗೋಲಿ ಸ್ಪರ್ಧೆ ಹಾಗೂ ಸುತ್ತೂರು ಜಾತ್ರಾಮಹೋತ್ಸವದ ನಾಟಕ ಉದ್ಘಾಟನೆಯಾಗಲಿದೆ.
ಇಂದು ಸಹ ರಾಜ್ಯದ ಮಂತ್ರಿಗಳು, ಕೇಂದ್ರದ ನಾಯಕರು ಸೇರಿದಂತೆ ಹಲವರು ಭಾಗಿಯಾಗಲಿದ್ದು, ಸಹಸ್ರಾರು ಜನರು ಜಾತ್ರೆಯನ್ನು ಕಣ್ತುಂಬಿಕೊಳ್ಳಲಿದ್ದಾರೆ.
ಇಂದು ನೂರಾರು ಜೋಡಿ ನವ ಜೀವನಕ್ಕೆ ಕಾಲಿಡಲಿದ್ದು, ಹೊಸ ಜೋಡಿಗೆ ಗಣ್ಯಾತಿಗಣ್ಯರ ಆಶೀರ್ವಾದ ಸಿಗಲಿದೆ.





