ಮೈಸೂರು : ಒಳ ಮೀಸಲಾತಿ ಜಾರಿ ಸಂಬಂಧ ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ಆಯೋಗ ನೀಡಿರುವ ವರದಿಯನ್ನು ಹೊಲಯ, ಮಾದಿಗ ಸಮುದಾಯಗಳಿಗೆ ಯಾವುದೇ ರೀತಿಯಲ್ಲೂ ಅನ್ಯಾಯವಾಗದಂತೆ ಪರಿಷ್ಕರಿಸಿ ಜಾರಿಗೊಳಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಮಾಜಿ ಸಚಿವ ಎನ್.ಮಹೇಶ್ ಆಗ್ರಹಿಸಿದರು.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಿಗ ಸಮುದಾಯ ಒಳ ಮೀಸಲಾತಿಗಾಗಿ ಹೋರಾಟ ನಡೆಸಿದ್ದರಿಂದ ರಾಜ್ಯ ಸರ್ಕಾರ ನಾಗಮೋಹನ್ ದಾಸ್ ಆಯೋಗವನ್ನು ರಚಿಸಿತ್ತು. ಈ ಆಯೋಗವು ೧೦೧ ಜಾತಿಗಳನ್ನು ಗುರುತಿಸಿ, ಅವುಗಳನ್ನು ಐದು ಕ್ಯಾಟಗರಿಯನ್ನಾಗಿ ಮಾಡಿ, ಮೀಸಲಾತಿಯನ್ನು ಹಂಚಿಕೆ ಮಾಡಿ ನಿಗದಿಪಡಿಸಿದೆ.
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಅದರಂತೆ ಆಯೋಗವು ಮೀಸಲಾತಿಯನ್ನು ನಿಗದಿಪಡಿಸಿದೆ. ಆದರೆ ಹೊಲಯ ಸಮುದಾಯಕ್ಕೆ ಸೇರಿದ ಒಂದು ಕ್ಯಾಟಗರಿಯನ್ನು ಪ್ರತ್ಯೇಕವಾಗಿಟ್ಟಿದೆ. ಅದಕ್ಕೆ ಶೇ.೧ರಷ್ಟು ಮೀಸಲಾತಿಯನ್ನು ನಿಗದಿಪಡಿಸಿದ್ದು, ಹೊಲಯ ಸಮುದಾಯಕ್ಕೆ ಶೇ.೫ ರಷ್ಟು ಮೀಸಲಾತಿ, ಮಾದಿಗ ಸಮುದಾಯಕ್ಕೆ ಶೇ.೬ ರಷ್ಟು ಮೀಸಲಾತಿಯನ್ನು ನಿಗದಿಪಡಿಸಿದೆ. ಹೊಲಯ ಸಮುದಾಯಕ್ಕೆ ಇದರಿಂದಾಗಿ ಅನ್ಯಾಯವಾಗುತ್ತದೆ ಎಂಬುದು ನಮ್ಮ ಅಭಿಪ್ರಾಯ ಎಂದರು.
ದಲಿತ ಬಲಗೈ ಸಮುದಾಯಕ್ಕೆ ಸೇರಿದವರನ್ನು ಪ್ರತ್ಯೇಕ ಮಾಡಿರುವುದು ಸರಿಯಲ್ಲ. ಅವರನ್ನೂ ನಮ್ಮ ಸಮುದಾಯಕ್ಕೆ ಸೇರಿಸಿ, ಮೀಸಲಾತಿ ಪ್ರಮಾಣವನ್ನು ಶೇ.೬ಕ್ಕೆ ನಿಗದಿಪಡಿಸಬೇಕು. ಕೆಟಗರಿಯನ್ನು ಐದರಿಂದ ನಾಲ್ಕಕ್ಕೆ ಇಳಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಈ ರೀತಿ ನಾಗಮೋಹನ್ ದಾಸ್ ಅವರ ವರದಿಯನ್ನು ಪರಿಷ್ಕರಣೆ ಮಾಡುವುದರಿಂದ ದಲಿತ ಸಮುದಾಯದ ಸಹೋದರರಂತಿರುವ ಹೊಲಯ ಹಾಗೂ ಮಾದಿಗರಿಗೆ ಯಾವುದೇ ಅನ್ಯಾಯವಾಗುವುದಿಲ್ಲ. ಎರಡು ಸಮುದಾಯಕ್ಕೂ ಸಮಾನ ಮೀಸಲಾತಿ ನೀಡಿದಂತಾಗುತ್ತದೆ ಎಂದು ಹೇಳಿದರು.
ರಾಜ್ಯಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಸಂಬಂಧಿಸಿದ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳು ನ್ಯಾ. ನಾಗಮೋಹನ್ ದಾಸ್ ಅವರ ವರದಿಯನ್ನು ಪರಿಷ್ಕರಿಸುವ ಕೆಲಸವನ್ನು ಮಾಡಬೇಕು. ಸದ್ಯದಲ್ಲೇ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯುವ ಸಚಿವ ಸಂಪುಟ ಸಭೆಗೆ ಪರಿಷ್ಕೃತ ವರದಿಯನ್ನು ಮಂಡಿಸಬೇಕು. ಅಲ್ಲಿ ಚರ್ಚಿಸಿದ ಬಳಿಕ ವರದಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಎನ್. ಸುಬ್ಬಣ್ಣ, ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಪರಮಾನಂದ್, ಎಸ್‌ಸಿ ಮೋರ್ಚಾ ನಗರ ಅಧ್ಯಕ್ಷ ವಿ.ಶೈಲೇಂದ್ರ, ಎಸ್.ಸಿ ಮೋರ್ಚಾ ಗ್ರಾಮಾಂತರ ಅಧ್ಯಕ್ಷ ಅನಿಲ್ ಕುಮಾರ್, ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಮರಿಯಪ್ಪ, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಹಾಜರಿದ್ದರು.





