ಹುಣಸೂರು: ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ..ಸಿ ಪುಟ್ಟಸಿದ್ದಶೆಟ್ಟಿ ಆರೋಪಿಸಿದರು.
ಇಂದು (ಮೇ.16) ನಗರದ ಪತ್ರಕರ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಾ ರಾಜಕೀಯ ಪಕ್ಷಗಳು ಪ್ರಬಲ ಜಾತಿಗಳಿಗೆ ಅವಕಾಶ ನೀಡುತ್ತಿವೆ, ಮೈಸೂರು ಚಾಮರಾಜನಗರ ಜಿಲ್ಲೆಗಳ ಆಕಾಂಕ್ಷಿಗಳಿಗೆ ಅವಕಾಶ ನೀಡುತ್ತಿಲ್ಲ, ಇದರಿಂದ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅನ್ಯಾಯವಾಗುತ್ತಿದೆ. ಹಿಂದುಳಿದ ವರ್ಗಗಳ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರ ದೊಡ್ಡ ಸಮಾಜಗಳಿಗೆ ಅವಕಾಶ ಮಾಡಿಕೊಡುವುದು ಎಷ್ಟು ಸರಿ? ಸಿದ್ದರಾಮಯ್ಯನವರ 14 ಬಜೆಟ್ ಗಳಲ್ಲಿಯೂ ಕೂಡ ಶಿಕ್ಷಕರಿಗೆ ಅನ್ಯಾಯವಾಗಿದೆ ಎಂದು ದೂರಿದರು.
ಅತಿಥಿ ಶಿಕ್ಷಕರಿಗೆ ಏಳು ತಿಂಗಳಿಂದ ಸಂಬಳ ಕೊಟ್ಟಿಲ್ಲ, ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಹೋರಾಟ ಮಾಡುವವರು ಯಾರು ಇಲ್ಲ, 1986 ರಲ್ಲಿ ನಾನು ಶಿಕ್ಷಕರ ಸಂಘವನ್ನು ಕಟ್ಟಿ, ಶಿಕ್ಷಣ ವೃತ್ತಿಯನ್ನು ಗೌರವಿಸಿಕೊಂಡು ಶಿಕ್ಷಕರಿಗಾಗಿಯೇ ನನ್ನ ಜೀವನ ಮುಡಿಪಾಗಿಟ್ಟಿದ್ದೇನೆ. ಶಿಕ್ಷಕರು ನನ್ನ ಕೆಲಸ ಮತ್ತು ಹೋರಾಟವನ್ನು ಗಮನದಲ್ಲಿಟ್ಟುಕೊಂಡು ಮತಗಟ್ಟೆಗೆ ಹೋದಾಗ ನನಗೆ ಮೊದಲ ಪ್ರಾಶಸ್ತ್ಯದ ಮತ ಕೊಡಿ ಎಂದು ಕೋರಿಕೊಂಡರು.
ಸ್ವಾಭಿಮಾನಿ ಶಿಕ್ಷಕರ ವೇದಿಕೆ ನನ್ನದು, ಈ ವೇದಿಕೆ ಹೆಸರಲ್ಲಿ ಶ್ರೀಕಂಠೇಗೌಡ ನಾಮಪತ್ರ ಸಲ್ಲಿಸುವುದು ಎಷ್ಟು ಸರಿ? ಇವನು ಪಕ್ಷ ಜಾತಿವಾದಿ, ಚಲನಚಿತ್ರ ನಟ ಅಂಬರೀಶ್ ಅವರ ಪತ್ನಿ ಸುಮಲತಾ ರವರನ್ನು ಗೌಡ್ತಿಯಲ್ಲ ಎಂದು ಆರೋಪಿಸಿದ್ದರು. ಜಾತಿ ಹೆಸರಲ್ಲಿ ರಾಜಕೀಯ ಮಾಡುವವರನ್ನು ತಿರಸ್ಕರಿಸಿ ನಮ್ಮಂತಹ ಹಿಂದುಳಿದ ವರ್ಗದವರನ್ನು ಈ ಬಾರಿ ಚುನಾವಣೆಯಲ್ಲಿ ಕೈ ಹಿಡಿಯಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ರಾಜ್ಯ ಕಾಯಕ ಸಮಾಜಗಳ ಸಂಚಾಲಕ ಕೆಂಪಶೆಟ್ಟಿ, ಸಂಘದ ನಿರ್ದೇಶಕ ಬಸಲಾಪುರ ಕುಮಾರ್ ಹಾಜರಿದ್ದರು.