ಮೈಸೂರು: ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನ ನಮ್ಮನ್ನಷ್ಟೇ ಅಲ್ಲ, ಭಾರತಾಂಬೆಯನ್ನೇ ರಕ್ಷಣೆ ಮಾಡುತ್ತಿದೆ. ಈ ನೆಲ ಇರುವವರೆಗೂ ಸಂವಿಧಾನ ಶಾಶ್ವತವಾಗಿರುತ್ತದೆ. ಈ ದೇಶದ ಬಹತೇಕ ಜನರು ಆರಾಧಿಸುವ ಸಾಕ್ಷಾತ್ ಶ್ರೀರಾಮನೇ ಪ್ರತ್ಯಕ್ಷವಾಗಿ ಬಂದರೂ ಭಾರತ ಸಂವಿಧಾನವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ.ಸುಧಾಕರ ಹೊಸಳ್ಳಿ ಅಭಿಪ್ರಾಯಪಟ್ಟರು.
ಶಾರದಾ ವಿಲಾಸ ಶಿಕ್ಷಣ ಸಂಸ್ಥೆಗಳ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ ೧೩೩ನೇ ಜಯತೋತ್ಸವದ ಕಾರ್ಯಕ್ರಮವನ್ನು ನಗರದ ಕೃಷ್ಣಮೂರ್ತಿ ಪುರಂ ಬಳಿ ಇರುವ ಶಾರದಾ ವಿಲಾಸ ಕಾಲೇಜಿನ ಪ್ರೊ.ಚಿನ್ನಸ್ವಾಮಿ ಶೆಟ್ಟಿ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನ ಅದೊಂದು ಪುಸ್ತಕ ರೂಪದ ದಾಖಲೆ ಅಲ್ಲ ಅಥವಾ ಎರವಲು ಸಂವಿಧಾನವೂ ಅಲ್ಲ. ದೇಶದ ಜನರ ಬದುಕು ಮತ್ತು ಭವಿಷ್ಯವನ್ನು ನಿರ್ಧರಿಸುವ ಜೀವಂತ ಶಾಸನ. ನಮ್ಮ ಸಂವಿಧಾನದ ಬಗ್ಗೆ ಗೌರವ, ಆಸಕ್ತಿ ಮತ್ತು ಅಧಿಕೃತ ಮಾಹಿತಿಯನ್ನು ಈ ದೇಶದ ಯುವ ಜನರು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂವಿಧಾನವನ್ನು ಅರ್ಥವಾಡಿಕೊಳ್ಳದೇ ರೂಪಿಸಲ್ಪಪಟ್ಟ ಅರ್ಥಶಾಸ್ತ್ರ ಮತ್ತು ಇತಿಹಾಸ ವ್ಯರ್ಥವಾಗಿ ಬಿಡುತ್ತದೆ. ಆದ್ದರಿಂದ ಪ್ರತಿಯೊಂದು ವಿಷಯದ ಪ್ರತಿಪಾದನೆಗೂ ಸಂವಿಧಾನವೇ ಅಡಿಪಾವಾಗಬೇಕು. ಅಂಬೇಡ್ಕರ್ ಅವರ ಕುರಿತಾಗಿ ಎಷ್ಟೋ ವಿಷಯಗಳು ಜನಸಾಮಾನ್ಯರಿಗೆ ತಲುಪಿಲ್ಲ . ಅವುಗಳನ್ನು ಜನರಿಗೆ ತಲುಪಿಸುವ ಕೆಲಸ ಯುವ ಜನತೆಯಿಂದ ಆಗಬೇಕು ಎಂದು ಹೇಳಿದರು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿಯೇ ಭಾರತದ ಅಸ್ಮಿತೆಯನ್ನು ಎತ್ತಿ ಹಿಡಿದಿದ್ದ ಮಹಾನ್ ರಾಷ್ಟ್ರ ಪ್ರೇಮಿ. ಪ್ರತಿಯೊಬ್ಬ ಭಾರತೀಯರೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ರೀತಿಯಲ್ಲಿ ದೇಶವನ್ನು ಪ್ರೀತಿಸಿದರೆ ಭಾರತ ಪ್ರಪಂಚದ ಅತಿ ದೊಡ್ಡ ರಾಷ್ಟ್ರವಾಗುವುದರಲ್ಲಿ ಸಂಶಯವೇ ಇಲ್ಲ. ಜಗತ್ತಿನ ಬಹುತೇಕ ರಾಷ್ಟ್ರಗಳು ಅಂಬೇಡ್ಕರ್ ಅವರ ಜ್ಞಾನ ಮತ್ತು ಸಾಮಾಜಿಕ ಸಮಾನತೆಯನ್ನು ಸಾಧಿಸಲು ಅವರು ಪಟ್ಟ ಪರಿಶ್ರಮವನ್ನು ಗುರುತಿಸಿ ಒಪ್ಪಿಕೊಂಡಿವೆ ಎಂದರು.
ಶಾರದಾ ವಿಲಾಸ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಎನ್. ಚಂದ್ರಶೇಖರ್ ಕಾರ್ಕ್ರಯಮದಲ್ಲಿ ಉಪಸ್ಥಿತರಿದ್ದರು.
ಜಾತಿ ವ್ಯವಸ್ಥೆ ಮತ್ತು ಅಸ್ಪಶ್ಯತೆ ಈ ದೇಶದ ಶೋಷಿತ ಸಮುದಾಯಗಳನ್ನು ಇನ್ನಿಲ್ಲದಂತೆ ಶೋಷಣೆ ಮಾಡಿತ್ತು. ಇದೆಲ್ಲದರ ಅರಿವಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರು ಅಸ್ಪಶ್ಯತಾ ಆಚರಣೆ ಅಪರಾಧ ಎಂದು ಕಾನೂನು ಮಾಡಿದರು. ಜಗತ್ತಿನಲ್ಲಿ ಅಸ್ಪಶ್ಯತೆಯತಹ ಕ್ರೂರ ಆಚರಣೆಯನ್ನು ಅಪರಾಧ ಎಂದು ಕಾನೂನು ಮಾಡಿದ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ-
- ಡಾ. ಸುಧಾಕರ ಹೊಸಳ್ಳಿ , ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲುಂದ ನಿರ್ದೇಶಕ.