Mysore
19
broken clouds

Social Media

ಸೋಮವಾರ, 09 ಫೆಬ್ರವರಿ 2026
Light
Dark

ಜೋಡಿಲಿಂಗ ಶ್ರೀ ಮಹದೇಶ್ವರ ದೇವಸ್ಥಾನ ಉದ್ಘಾಟನೆ : ಸಾವಿರಾರು ಮಂದಿ ದರ್ಶನ, ಕೊಂಡೋತ್ಸವದಲ್ಲಿ ಭಕ್ತಿಪರವಶ

ಮೈಸೂರು : ತಾಲ್ಲೂಕಿನ ಜಯಪುರ ಹೋಬಳಿಯ ಮಂಡನಹಳ್ಳಿ ಗ್ರಾಮದಲ್ಲಿ ನವೀಕರಣಗೊಂಡ ಜೋಡಿಲಿಂಗ ಶ್ರೀ ಮಹದೇಶ್ವರ ದೇವಸ್ಥಾನದ ಉದ್ಘಾಟನಾ ಸಮಾರಂಭವು ಭಕ್ತಿಯ ಜ್ವಾಲೆಯಂತೆ ಆಚರಣೆಯಾಯಿತು.

ಫೆಬ್ರವರಿ 8ರಿಂದ 10ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಈ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯ ಭಕ್ತಾಧಿಗಳು ಭಾಗವಹಿಸಿ, ಮಾದಪ್ಪನ (ಶ್ರೀ ಮಹದೇಶ್ವರ ಸ್ವಾಮಿ) ದಿವ್ಯ ದರ್ಶನ ಪಡೆದು ಭಕ್ತಿಪರವಶರಾದರು.

ದೇವಸ್ಥಾನವನ್ನು ತಳಿರು-ತೋರಣಗಳು, ವಿವಿಧ ಪುಷ್ಪಗಳು, ಬಾವಲಿಗಳು, ಛತ್ರಿ, ಚಾಮರ ಮತ್ತು ಪೂರ್ಣಕುಂಭಗಳಿಂದ ಅಲಂಕರಿಸಿ ಸಿಂಗರಿಸಲಾಗಿತ್ತು. ಉದ್ಘಾಟನಾ ಸಂದರ್ಭದಲ್ಲಿ ಸ್ವಸ್ತಿ ಪುಣ್ಯಾಹವಾಚನ, ಪಂಚ ಕಳಶ ಪ್ರತಿಷ್ಠಾಪನೆ, ನವಗ್ರಹ ಕಳಶ, ನವಗ್ರಹ ಹೋಮ, ರುದ್ರಹೋಮ, ರುದ್ರಾಭಿಷೇಕ ಮುಂತಾದ ವಿಶೇಷ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ನೆರವೇರಿದವು. ಮಾದಪ್ಪನ ಮೂರ್ತಿಯನ್ನು ಗ್ರಾಮದ ಬೀದಿಗಳಲ್ಲಿ ವಿಜಯೋತ್ಸವದ ಮೆರವಣಿಗೆಯಲ್ಲಿ ಸಾಗಿಸಲಾಯಿತು. ವೀರಗಾಸೆ, ಕಹಳೆ, ನಂದಿಕೋಲ್, ಪ್ರದರ್ಶನಗಳು, ಮಂಗಳವಾಧ್ಯಗಳ ಮೊಳಗು ಮತ್ತು ಜೈಕಾರಗಳೊಂದಿಗೆ ಮೆರವಣಿಗೆಯು ಭಕ್ತಿಯ ವಾತಾವರಣವನ್ನು ಸೃಷ್ಟಿಸಿತು. ಮೆರವಣಿಗೆಯ ನಂತರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ನಡೆದು, ಭಕ್ತರು ದರ್ಶನ ಪಡೆದರು.

ಮೂರು ದಿನಗಳ ಕಾಲ ನಿರಂತರ ಅನ್ನದಾಸೋಹ ನಡೆಸಿ ಭಕ್ತರಿಗೆ ಸಂತರ್ಪಣೆ ಮಾಡಲಾಯಿತು. ಬೆಳಗಿನ ಜಾವದಲ್ಲಿ ನಡೆದ ಕೊಂಡೋತ್ಸವದಲ್ಲಿ ನೂರಾರು ಭಕ್ತರು ಕೊಂಡ ಹಾಯ್ದು, ಮಾದಪ್ಪನ ಮಹಿಮೆಯನ್ನು ಕೊಂಡಾಡಿ ಹರಕೆಗಳನ್ನು ಇಟ್ಟು ಪುನೀತರಾದರು.

ಧಾರ್ಮಿಕ ಸಭೆಯಲ್ಲಿ ತುಮಕೂರು ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ಧೇಶ್ವರ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಧರ್ಮ ಮತ್ತು ಆಧ್ಯಾತ್ಮಕ್ಕೆ ವಿಶಿಷ್ಟ ಸ್ಥಾನವಿದೆ ಎಂದು ಹೇಳಿದರು.

ಪ್ರಕೃತಿಯನ್ನು ದೇವರಾಗಿ ಪೂಜಿಸುವ ಸಂಪ್ರದಾಯ ಭಾರತದ್ದು. ದೇವಸ್ಥಾನಗಳು ಶ್ರದ್ಧಾ-ಭಕ್ತಿ ಕೇಂದ್ರಗಳಾಗಿ, ಶಿಕ್ಷಣ ಕೇಂದ್ರಗಳಾಗಿ ಬೆಳೆದಿವೆ ಎಂದು ವಿವರಿಸಿದರು. ಆಧುನಿಕ ಯಾಂತ್ರಿಕ ಜೀವನದಲ್ಲಿ ಸಂಸ್ಕಾರಗಳು ಕಡಿಮೆಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿ, ಭಕ್ತಿಯನ್ನು ತನುಮನದಿಂದ ಅರ್ಪಿಸಿ, ಕಾಯಕವನ್ನು ಶ್ರದ್ಧೆಯಿಂದ ಮಾಡಬೇಕು ಎಂದು ಉಪದೇಶಿಸಿದರು. ಉಚಿತಗಳ ಆಸೆಯಿಂದ ಸೋಮಾರಿತನ ಬರಬಾರದು; ಕಾಯಕ ಪ್ರೀತಿಯೇ ದೇವರನ್ನು ಒಲಿಸುವುದು ಎಂದು ತಿಳಿಸಿದರು.

ಮೈಸೂರು ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ ಅವರು ಮಾತನಾಡಿ, ಹಿಂದೆ ಸಣ್ಣ ದೇವಸ್ಥಾನವಿದ್ದ ಸ್ಥಳದಲ್ಲಿ ಇಂದು ವೈಭವದ ದೇವಾಲಯ ನಿರ್ಮಾಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಸೋತು, ಹಣದ ಕೊರತೆಯಿದ್ದರೂ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ತನ್ನ ಸ್ವಂತ 3 ಎಕರೆ ಜಮೀನನ್ನು ಮಾರಿ ಸುಮಾರು 2.5 – 3 ಕೋಟಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಿಸಿದ್ದೇನೆ ಎಂದು ಭಾವುಕರಾದರು. ಇದರಿಂದ ಮನಸ್ಸಿಗೆ ತೃಪ್ತಿ ದೊರೆತಿದ್ದು, ಮತ್ತಷ್ಟು ಸೇವೆ ಮಾಡುವ ಆಸೆ ಹೆಚ್ಚಿದೆ. ದಾನ-ಧರ್ಮ-ದಾಸೋಹದ ಪರಂಪರೆಯನ್ನು ಇಲ್ಲಿ ಮುಂದುವರಿಸಲಾಗುತ್ತಿದೆ ಎಂದು ಹೇಳಿದರು.

ಕನಕಪುರ ದೇಗುಲ ಮಠದ ಡಾ. ಚನ್ನಬಸವಸ್ವಾಮಿಜಿ, ಪುರ ಶ್ರೀ ಬಸವೇಶ್ವರ ಪಟ್ಟದ ಮಠದ ಚಂದ್ರಶೇಖರ ಸ್ವಾಮಿಜಿ, ಮೈಸೂರು ಕುದೇರು ಮಠದ ಗುರುಶಾಂತ ಸ್ವಾಮಿಜಿ, ಸಂಗಮ ಕಾರ್ಯಸ್ವಾಮಿ ಮಠದ ಮಹದೇಶ್ವರ ಸ್ವಾಮಿಜಿ, ಹುಣಸೂರು ಮಾದವಳ್ಳಿ ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮಿಜಿ, ಮಂಡ್ಯ ಬೇಬಿಬೆಟ್ಟ ರಾಮಯೋಗೀಶ್ವರ ಮಠದ ಶಿವಬಸವ ಸ್ವಾಮಿಜಿ, ಹಂಚೀಪುರ ಶ್ರೀ ಸಿದ್ಧಮಲ್ಲೇಶ್ವರ ಪಟ್ಟದ ಮಠದ ತೋಂಟದಾರ್ಯ ಸ್ವಾಮಿಜಿ ಸೇರಿದಂತೆ ಹಲವು ಶ್ರೀಗಳು, ಕಮಲಮ್ಮ ಸಿದ್ದೇಗೌಡ, ನಾಗೇಂದ್ರ ಆರಾಧ್ಯ, ಶಿವರಾಜಪ್ಪ ಮುಂತಾದ ಮುಖಂಡರು ಉಪಸ್ಥಿತರಿದ್ದರು.

 

Tags:
error: Content is protected !!