ಪಿರಿಯಾಪಟ್ಟಣ: ಮುಂದೊಂದು ದಿನ ಪ್ರಪಂಚದ ಭೂಪಟದಲ್ಲಿ ಮೈಸೂರು ಕ್ಷೇತ್ರವನ್ನು ಅತ್ಯಂತ ಜನಪ್ರಿಯ ಪ್ರವಾಸಿ ತಾಣವನ್ನಾಗಿ ಮಾಡುವ ಗುರಿಯಿದೆ ಎಂದು ಮೈಸೂರು-ಕೊಡಗು ಬಿಜೆಪಿ ಲೋಕಸಭಾ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು (ಮಾ.೧೬) ನಗರದ ಬಿಜೆಪಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮೈಸೂರಿನ ರಾಜಮನೆತನದ ಹೆಸರಿನಲ್ಲಿ ಮೈಸೂರನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಅನೇಕ ಯೋಜನೆಗಳು ನನ್ನ ಮುಂದಿದ್ದು ನಿಮ್ಮೆಲ್ಲರ ಸಹಕಾರವಿದ್ದರೆ ಮುಂದೊಂದು ದಿನ ಪ್ರಪಂಚದ ಭೂಪಟದಲ್ಲಿ ಮೈಸೂರು ಕ್ಷೇತ್ರವನ್ನು ಅತ್ಯಂತ ಜನಪ್ರಿಯ ಪ್ರವಾಸಿ ತಾಣವನ್ನಾಗಿ ಮಾಡುವುದಾಗಿ ಯದುವೀರ್ ಹೇಳಿದರು.
ನಾನು ರಾಜ ಮನೆತನದಿಂದ ಬಂದಿದ್ದರು ಸಹ ಜನಪ್ರತಿನಿಧಿಯಾಗಿ ಜನಸಾಮಾನ್ಯರ ಧ್ವನಿಯಾಗುವೆ, ಈ ಹಿಂದೆಯೂ ಸಹ ನಮ್ಮ ಮನೆತನದಿಂದ ರಾಜಕೀಯ ಪ್ರಕ್ರಿಯೆಗಳು ನಡೆದಿದ್ದು ಈ ಸಾರಿ ನಾನು ಸಹ ಲೋಕಸಭಾ ಅಭ್ಯರ್ಥಿಯಾಗಿ ಜನ ಸೇವೆಗೆ ಮುಂದಾಗಿದ್ದೇನೆ ಎಂದರು.
ನಾನು ಜನಪ್ರತಿನಿಧಿಯಾಗಿ ಮುಂದಿನ ಎಲ್ಲಾ ಸವಾಲುಗಳನ್ನು ಸ್ವೀಕರಿಸಿ ನಿಮ್ಮೆಲ್ಲರ ಸಹಕಾರದಿಂದ ಎದುರಿಸಲು ಸಿದ್ಧನಾಗಿದ್ದೇನೆ ಇದಕ್ಕೆ ನಿಮ್ಮೆಲ್ಲರ ಹಾಗೂ ಕಾರ್ಯಕರ್ತರ ಸಹಕಾರ ಅತ್ಯಗತ್ಯ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ರಾಜೇಂದ್ರ, ಕಾರ್ಯದರ್ಶಿ ಚೆನ್ನಬಸವರಾಜ್, ಮಾಜಿ ಶಾಸಕ ರಾಮದಾಸ್, ಸ್ಥಳೀಯ ಮುಖಂಡರುಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.





