Mysore
30
clear sky

Social Media

ಗುರುವಾರ, 29 ಜನವರಿ 2026
Light
Dark

ಜಾತಿ ಜನಗಣತಿ ಕೈ ಸೇರಿದ ಕೂಡಲೇ ಒಳ ಮೀಸಲಾತಿ ಜಾರಿ : ಸಚಿವ ಎಚ್.ಸಿ ಮಹದೇವಪ್ಪ

ತಿ.ನರಸೀಪುರ: ರಾಜ್ಯ ಸರ್ಕಾರ, ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವನಾದ ನಾನು ಸೇರಿ ಮೂವರು ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಪರವಿದ್ದೇವೆ. ನ್ಯಾ.ನಾಗಮೋಹನ್ ದಾಸ್ ಜಾತಿ ಜನಗಣತಿ ವರದಿ ಕೈ ಸೇರಿದ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಭರವಸೆ ನೀಡಿದರು.

ತಾಲ್ಲೂಕಿನ ವ್ಯಾಸರಾಜಪುರ ಗ್ರಾಮದಲ್ಲಿ ಶನಿವಾರ ಮಾದರಿ ವಿದ್ಯುತ್ ಗ್ರಾಮ ಯೋಜನೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ವರುಣ ವಿಧಾನಸಭಾ ಕ್ಷೇತ್ರದ ಹುಣಸೂರು ಗ್ರಾಮದ ಸಮುದಾಯ ಯುವಕನೋರ್ವ ಸಚಿವರಿಗೆ ಮುತ್ತಿಗೆ ಹಾಕಿ, ಒಳ ಮೀಸಲಾತಿ ಜಾರಿಯ ಬಗ್ಗೆ ನಿಮ್ಮ ನಿಲುವನ್ನು ಪ್ರಕಟಿಸಬೇಕೆಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಪ್ರತ್ರಿಕ್ರಿಯಿಸಿದ ಸಚಿವರು, ದತ್ತಾಂಶಕ್ಕೆ ಆಯೋಗ ಅಂಕಿ ಸಂಖ್ಯೆ ಕೊಟ್ಟಾಗ ಸಂವಿಧಾನದ ನಿಯಮದಡಿ ಒಳ ಮೀಸಲನ್ನು ನಾವೇ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಒಳ ಮೀಸಲಾತಿ ಜಾರಿಗೆ ಸಂಬಂಧ ಸುಪ್ರೀಂ ಕೋರ್ಟ್ ಆಯಾಯ ರಾಜ್ಯ ಸರ್ಕಾರಗಳು ನಿರ್ಧಾರ ತೆಗೆದುಕೊಳ್ಳಬಹುದೆಂದು ಆದೇಶ ನೀಡಿದ ಬಳಿಕ ಹರಿಯಾಣದಲ್ಲಿ ಸರ್ಕಾರ ಸಂಪೂರ್ಣವಾಗಿ ಜಾರಿ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆಯಾದರೂ ಇನ್ನೂ ಜಾರಿ ಮಾಡಿಲ್ಲ. ನೆರೆಯ ತೆಲಂಗಾಣದಲ್ಲಿರುವ ಕಾಂಗ್ರೆಸ್ ಸರ್ಕಾರ ಹಾಗೂ ಆಂಧ್ರಪ್ರದೇಶದಲ್ಲಿ ಒಳಮೀಸಲಿಗೆ ಅಲ್ಲಿನ ಸರ್ಕಾರಗಳು ಮುಂದಾಗಿವೆ. ಪರಿಶಿಷ್ಟರ ಜಾತಿ ಪಟ್ಟಿಯಲ್ಲಿನ ಜಾತಿಯನ್ನು ತೆಗೆಯುವುದು ಅಥವಾ ಮತ್ತೊಂದು ಜಾತಿಯನ್ನು ಸೇರ್ಪಡೆಗೊಳಿಸುವ ಅಧಿಕಾರ ಸಂಸತ್ತಿಗೆ ಇದೆ. ಮಾದಿಗ ಅಥವಾ ಹೊಲೆಯ ಎಂಬ ಪದವನ್ನು ಬಳಸುವುದೇ ಅಸ್ಪೃಶ್ಯತೆ ಆಚರಿಸಿದಂತೆ ಎಂಬುದನ್ನು ಸಮುದಾಯಗಳು ಅರಿಯಬೇಕು. ಈ ಹಿಂದೆಯೇ ಒಳ ಮೀಸಲಾತಿ ಜಾರಿಗೆ ತರಲು ಮಾಯಾವತಿ ಸೇರಿದಂತೆ ಬಾಬೂಜಿ ಪುತ್ರಿ ಮೀರಾ ಕುಮಾರ್ ಹಾಗೂ ರಾಮವಿಲಾಸ್ ಪಾಸ್ವಾನ್ ನಿರಾಕರಿಸಿದ್ದರು ಎಂಬುದನ್ನು ನೆನಪಿಸಿದರು.

ರಾಜ್ಯದಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಒಳಮಿಸಲಾತಿ ಸಂಬಂಧ ನ್ಯಾ.ಸದಾಶಿವ ಆಯೋಗವನ್ನು ರಚನೆ ಮಾಡಲಾಯಿತು. ಅಲ್ಲಿಂದ ಕಾಂಗ್ರೆಸ್, ಬಿಜೆಪಿ ಹಾಗೂ ಜಾ.ದಳ ಸಮಿಶ್ರ ಸರ್ಕಾರಗಳ ಅವಧಿಯಲ್ಲಿಯೂ ಹೋರಾಟಗಳು ನಡೆಯುತ್ತಲೇ ಬಂದಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುವ ಬದಲು ಮುಚ್ಚಿಟ್ಟು, ಪರಿಶಿಷ್ಟ ಜಾತಿಯ ಮೀಸಲನ್ನು ಹಂಚಿಕೆ ಮಾಡಲಾಯಿತು. ೨೦೨೩ರ ಚುನಾವಣೆ ಪೂರ್ವದಲ್ಲಿ ಒಳಮೀಸಲಾತಿ ಜಾರಿ ಮಾಡುವ ಘೋಷಣೆಯೊಂದಿಗೆ ಕಾಂಗ್ರೆಸ್ ಚಿತ್ರದುರ್ಗದಲ್ಲಿ ಸಮಾವೇಶ ನಡೆಸಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಸಂಬಂಧ ಸಹಮತ ವ್ಯಕ್ತಪಡಿಸಿ ಜಾರಿಗೆ ಸೂಚನೆ ನೀಡುವುದರಿಂದ ಸಿಎಂ ಸೇರಿದಂತೆ ಸಂಪುಟದಲ್ಲಿರುವ ಪರಿಶಿಷ್ಟ ಜಾತಿಯ ಸಚಿವರು ಹಾಗೂ ಶಾಸಕರೆಲ್ಲರೂ ಒಳ ಮೀಸಲಾತಿಯನ್ನು ಕ್ರಮಬದ್ಧವಾಗಿ ಸಂವಿಧಾನದಲ್ಲಿ ಜಾರಿಗೆ ತರಲು ಮುಂದಾಗಿದ್ದೇವೆ ಎಂದು ಡಾ. ಹೆಚ್.ಸಿ.ಮಹದೇವಪ್ಪ ತಿಳಿಸಿದರು.

Tags:
error: Content is protected !!