ಮೈಸೂರು: ನಗರದ ಕೆ.ಜಿ ಕೊಪ್ಪಲು 42ನೇ ವಾರ್ಡಿನ ಅಂದಾಜು 45 ಲಕ್ಷ ವೆಚ್ಚದ ಒಳಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಶಾಸಕ ಕೆ. ಹರೀಶ್ ಗೌಡ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುವೆ. ಸ್ಪಷ್ಟ ಬಹುಮತವಿರುವ ಕಾಂಗ್ರೆಸ್ ಸರ್ಕಾರ ಇರುವುದರಿಂದ ಶಕ್ತಿಮೀರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು. ಅಭಿವೃದ್ಧಿಯ ಮೂಲಕ ರಾಜ್ಯದಲ್ಲಿ ಮಾದರಿಯನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದೇನೆ. ಇದನ್ನು ಪ್ರಾಮಾಣಿಕವಾಗಿ ಈಡೇರಿಸುತ್ತೇನೆ ಎಂಬ ದೃಢವಾದ ನಂಬಿಕೆಯಿದೆ ಎಂದು ತಿಳಿಸಿದರು.
ನನ್ನ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂಬ ಚಿಂತನೆಯಿಟ್ಟುಕೊಂಡಿದ್ದೇನೆ. ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲಾ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಬಳಿಕ ಈಡೇರಿಸಿದೆ. ಇದನ್ನು ಪಕ್ಷ ಬೇಧವಿಲ್ಲದೆ ಎಲ್ಲರ ಮನೆ- ಮನೆ ಮುಟ್ಟಿಸುವ ಕೆಲಸ ಕಾರ್ಯಕರ್ತರಿಂದಾಗಬೇಕು. ಜನರಿಗೆ ಸಹಾಯ ಮಾಡುವ ಮೂಲಕ ಜನರ ಪ್ರೀತಿಗಳಿಸಿ ಪಕ್ಷವನ್ನು ಭದ್ರವಾಗಿ ಕಟ್ಟೋಣ. ನಿಮ್ಮೊಂದಿಗೆ ನಾನು ಶಕ್ತಿಯಾಗಿರುತ್ತೇನೆ ಎಂದು ಹೇಳಿದರು
ಮಾಜಿ ನಗರ ಪಾಲಿಕೆ ಸದಸ್ಯರಾದ ಶಿವಕುಮಾರ್, ಮುಖಂಡರಾದ ಮಾದಪ್ಪ, ರಾಜ್ ಕುಮಾರ್, ಬೋರ್ ರಪ್ಪ ,ಮಂಜುನಾಥ್ ಅಧಿಕಾರಿಗಳಾದ ಮುಸ್ತಫ, ನಂದೀಶ್ ನಟೇಶ್ ಮುಂತಾದವರು ಹಾಜರಿದ್ದರು