Mysore
20
overcast clouds
Light
Dark

‘ಚಿಂತಕರು, ಹೋರಾಟಗಾರರು ತಟಸ್ಥರಾಗಿದ್ದರೆ ರಾಷ್ಟ್ರಕ್ಕೆ ಮಾರಕ’

ಮೈಸೂರು : ಸಾವಾಜಿಕ, ರಾಜಕೀಯ ಸಮಸ್ಯೆಯಿಂದ ಜನರು ಬಳಲುತ್ತಿರುವಾಗ ಚಿಂತಕರು, ಹೋರಾಟಗಾರರು ತಟಸ್ಥವಾಗಿದ್ದರೆ ದೇಶಕ್ಕೆ ಮಾರಕ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯು ಬುಧವಾರ ದಲಿತ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ‘ಅಹಿಂದ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ಜಾತಿ ರಾಜಕೀಯ, ಧರ್ಮ ಹಾಗೂ ಭೂಗತ ರಾಜಕಾರಣ ಅಸ್ತಿತ್ವದಲ್ಲಿದ್ದು, ರಾಷ್ಟ್ರದ ಹಿತಕ್ಕಾಗಿ ಕಾಂಗ್ರೆಸ್ ಪರ ಅನಿವಾರ್ಯವಾಗಿ ನಿಂತಿದ್ದೇವೆ ಎಂದರು.

ಭೂಗತ ರಾಜಕಾರಣದಲ್ಲಿ ಸತ್ಯ ಹೇಳುವವರಿಗೆ ಬೆದರಿಕೆ ಹಾಕಿಸುವುದು, ದೇಶದ ಸ್ವತಂತ್ರ ಸಂಸ್ಥೆಗಳ ಮೂಲಕ ನಿಯಂತ್ರಣ ಸಾಧಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿರುವುದರಿಂದ ಮುಂದೆಯೂ ಸಾವಾನ್ಯ ಜನತೆ ತಮ್ಮ ಹಕ್ಕುಗಳನ್ನು ಕೇಳಲು ದಂಗೆ ಏಳಬೇಕಾಗುತ್ತದೆ ಎಂದರು.

ನರೇಂದ್ರ ಮೋದಿ ಅವರು ೪೦೦ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವುದಾಗಿ ಹೇಳಿಕೊಂಡಿದ್ದಾರೆ. ಅದನ್ನು ಹೇಳಲು ಅವರಿಗೆ ಸ್ವಾತಂತ್ರ್ಯವಿದೆ. ಆದರೆ, ಸಂವಿಧಾನ ಬದಲಾವಣೆ ನಮ್ಮ ಉದ್ದೇಶ ಎಂಬುದನ್ನು ಪರೋಕ್ಷವಾಗಿ ಹೇಳುತ್ತಿರುವುದು ಸರಿಯಿಲ್ಲ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಬದಲಿಸಿರುವ ವ್ಯವಸ್ಥೆಯನ್ನು ಮತ್ತೆ ಬದಲಿಸಲು ಬಿಜೆಪಿ ಮುಂದಾಗಿದೆ ಎಂದು ತಿಳಿಸಿದರು.

ಪ್ರಗತಿಪರ ಚಿಂತಕ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ, ಲೋಕಸಭಾ ಚುನಾವಣೆ ಐತಿಹಾಸಿಕ ಚುನಾವಣೆಯಾಗಿದ್ದು, ನಮ್ಮಲ್ಲಿ ಉತ್ತಮವಾದ ಸಂವಿಧಾನ ಇದ್ದು, ಇದಕ್ಕೆ ಕೇಂದ್ರ ಸರ್ಕಾರ ಅಪಚಾರ ಮಾಡುತ್ತಿರುವುದು ಸರಿಯಿಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಈ ರೀತಿಯ ದುಂಡುಮೇಜಿನ ಸಭೆ ನಡೆಯುತ್ತಿತ್ತು. ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಬಿಜೆಪಿ ಧರ್ಮ, ಜಾತಿ, ವರ್ಗಗಳ ನಡುವೆ ಕಂದಕ ಸೃಷ್ಟಿಸುತ್ತಿದೆ. ಎಲ್ಲ ಸಮುದಾಯಕ್ಕೂ ಸೇರಿದ ಈ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಯಾವುದೇ ಒಂದು ದಲಿತ ಪರ, ರೈತ ಪರ ಯೋಜನೆಗಳನ್ನೂ ರೂಪಿಸದೆ ಧರ್ಮ ಧರ್ಮಗಳ ನಡುವೆ ವೈರತ್ವ ಮೂಡುವಂತಹ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.

ಪ್ರಗತಿಪರ ಚಿಂತಕರಾದ ಬಂಜಗೆರೆ ಜಯಪ್ರಕಾಶ್, ಪ್ರೊ.ಬಿ.ಪಿ.ಮಹೇಶ್‌ಚಂದ್ರ ಗುರು, ಡಾ.ಬಾಬು ಜಗಜೀವನ್ ರಾಮ್ ಅಧ್ಯಯನ ಸಂಸ್ಥೆ ಮಾಜಿ ನಿರ್ದೇಶಕ ಪ್ರೊ.ಮೈಲಳ್ಳಿ ರೇವಣ್ಣ, ದಲಿತ ಮುಖಂಡ ಹರಿಹರ ಆನಂದಸ್ವಾಮಿ, ರೆಸ್ಪಾನ್ಸಿಬಲ್ ಸಿಟಿಜನ್  ರಾಜ್ಯಾಧ್ಯಕ್ಷ ಎಫ್.ಎಂ.ಕಲೀಂ, ಮುಸ್ಲಿಂ ಸಮುದಾಯದ ಮುಖಂಡ ಖದೀರ್ ಅಹಮದ್, ಮಾಜಿ ಮಹಾಪೌರ ನಾರಾಯಣ್‌, ಎಸ್‌ಸಿ-ಎಸ್‌ಟಿ ವಕೀಲರ ಕ್ಷೇವಾಭಿವೃದ್ಧಿ ಸಂಘದ ಕಾರ್ಯದರ್ಶಿ ತಿಮ್ಮಯ್ಯ, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎನ್.ಭಾಸ್ಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುವಾರ್, ನಗರಾಧ್ಯಕ್ಷ ಆರ್.ಮೂರ್ತಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಬಿ.ಸುಬ್ರಹ್ಮಣ್ಯ, ಕಾಂಗ್ರೆಸ್ ಮುಖಂಡ ಕಾಂತರಾಜ್, ಸವಿತಾ ಸವಾಜ ಮುಖಂಡ ಎನ್.ಆರ್.ನಾಗೇಶ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಜರಿದ್ದರು.