ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಭ್ರಷ್ಟಾಚಾರಗಳ ಕುರಿತು ಸದನದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡದೇ ಓಡಿಹೋದ ರಣಹೇಡಿ ಸಿದ್ದರಾಮಯ್ಯ. ಸಿಎಂ ಅವರಿಗೆ ನಿಜವಾಗಿಯೂ ತಾಕತ್ ಇದ್ದರೆ ಬಿಜೆಪಿ ಬಗೆಗಿನ ಭ್ರಷ್ಟಾಚಾರ ಹಗರಣಗಳನ್ನು ಬಿಚ್ಚಿಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸವಾಲೆಸೆದರು.
ಮೈಸೂರಿನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳಿಂದ ಆಯೋಜಿಸಿದ್ದ ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡದೇ ಓಡಿಹೋದ ರಣಹೇಡಿ ಸಿಎಂ ಸಿದ್ದರಾಮಯ್ಯ. ನಮ್ಮದು ಸಿದ್ದರಾಮಯ್ಯ ವಿರುದ್ಧದ ಹೋರಾಟವಲ್ಲ, ಭ್ರಷ್ಟ ಸಿಎಂ ವಿರುದ್ಧದ ಹೋರಾಟವಾಗಿದೆ. ನಾವು ಅಧಿಕಾರದ ಆಸೆಗಾಗಿ ಮಾಡುತ್ತಿರುವ ಹೋರಾಟವಲ್ಲ. ಬದಲಾಗಿ ರಾಜ್ಯದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಮಾಡುತ್ತಿರುವ ಹೋರಾಟವಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ಬಡವರ ಕಲ್ಯಾಣಕ್ಕೆ ಸಹಾಯಕವಾಗದ ದರಿದ್ರ ಸರ್ಕಾರ ಇದು. ರಾಜ್ಯದ ಜನರ ಪಾಲಿಗೆ ಈ ಸರ್ಕಾರ ಬದುಕಿದ್ದು ಸತ್ತಂತಿದೆ. ವಿರೋಧ ಪಕ್ಷಗಳು ಪ್ರಶ್ನಿಸಿದರೇ ಅವರ ಧನಿಯನ್ನು ಹತ್ತಿಕ್ಕುವ ಕೆಲಸ ಮಾಡಲು ಈ ಸರ್ಕಾರ ಮುಂದಾಗಿದೆ. ನಿಮ್ಮ ಭ್ರಷ್ಟಾಚಾರ ಆಡಳಿತಕ್ಕೆ ಬಹುಪರಾಕ್ ಹೇಳಿಕೊಂಡು ಜೊತೆಯಲ್ಲಿರಬೇಕಾ ಎಂದು ಬಿಬೈವಿ ಖಾರವಾಗಿ ಪ್ರಶ್ನಸಿದರು.





