ಮೈಸೂರು: `ನನ್ನ ಗಂಡನ ಕೊಲೆ ವೈಯಕ್ತಿಕ ಕಾರಣದಿಂದ ನಡೆದಿಲ್ಲ. ಧರ್ಮದ ವಿಚಾರದಲ್ಲಿಯೇ ಆಗಿದೆ’ ಎಂದು ತಿ.ನರಸೀಪುರದಲ್ಲಿ ಕೊಲೆಯಾದ ಯುವ ಬ್ರಿಗೇಡ್ ಸಂಚಾಲಕ ವೇಣುಗೋಪಾಲ್ ಪತ್ನಿ ಪೂರ್ಣಿಮಾ ಆರೋಪಿಸಿದರು.
ಓವರಸೀಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಗುರುವಾರ ಮಾತನಾಡಿದ ಅವರು, “ನಾನು ಹಾಗೂ ವೇಣುಗೋಪಾಲ್ ಪ್ರೀತಿಸಿ ಮದುವೆಯಾಗಿದ್ದವು. ಮೂರು ವರ್ಷಗಳಿಂದ ಹನುಮ ಜಯಂತಿ ಆಚರಣೆ ಮಾಡುತ್ತಿದ್ದೇವೆ. ನನ್ನ ಗಂಡನ ಬಳಿ ಹಣ ಇಲ್ಲ, ಅಧಿಕಾರ ಇರಲಿಲ್ಲ. ಆದರೂ ಹನುಮ ಜಯಂತಿಯಲ್ಲಿ ನೇತೃತ್ವ ವಹಿಸಿ ಆದೂರಿಯಾಗಿ ನಡೆಸುತ್ತಿದ್ದರು. ಅದನ್ನು ಸಹಿಸದೆ ಕೊಲೆ ಮಾಡಿದ್ದಾರೆ” ಎಂದು ಆರೋಪಿಸಿದರು.
“ನನ್ನ ಗಂಡನ ಸಾವಿಗೆ ನ್ಯಾಯ ಬೇಕು. ಇಲ್ಲವಾದರೆ ನಾನು, ನನ್ನ ಮಗಳು ಕೂಡ ಅವರಂತೆಯೇ ಸಾಯುತ್ತೇವೆ. ಮುಂದಿನ ವರ್ಷ ನಾನೂ ಹನುಮ ಜಯಂತಿ ಮಾಡುತ್ತೇನೆ. ಆಗ ನನ್ನನ್ನೂ ಸಾಯಿಸುತ್ತಾರೆ, ಅದರ ಮುಂದಿನ ವರ್ಷ ನನ್ನ ಮಗಳು ಹನುಮ ಜಯಂತಿ ಮಾಡಿದರೆ ಆಕೆಯನ್ನೂ ಸಾಯಿಸುತ್ತಾರೆ. ಅಲ್ಲಿಗೆ ಹಿಂದೂ ಧರ್ಮವೂ ಸಾಯುತ್ತದೆ. ನನ್ನ ಗಂಡನ ಏಳಿಗೆ ಸಹಿಸದೆ ಕೊಲೆ ಮಾಡಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.