ಮೈಸೂರು: ಐಸಿಸಿ ಚಾಂಪಿಯನ್ ಟ್ರೋಫಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಟೀಂ ಇಂಡಿಯಾ ಗೆಲುವಿಗಾಗಿ ಅಭಿಮಾನಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಇಂದು(ಮಾರ್ಚ್.9) ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಐಸಿಸಿ ಟ್ರೋಫಿಗಾಗಿ ಹೈವೋಲ್ಟೇಜ್ ಪಂದ್ಯ ನಡೆಯಿತು. 25 ವರ್ಷಗಳ ನಂತರ ಇವೆರಡು ತಂಡಗಳು ಫೈನಲ್ ಮುಖಾಮುಖಿಯಾಗುತ್ತಿದ್ದು, ಕ್ರಿಕೆಟ್ ಪ್ರೇಮಿಗಳಿಗಿಂದು ಸೂಪರ್ ಸಂಡೇಯಾಗಿದೆ.
ಇನ್ನು ಈ ಚಾಂಪಿಯನ್ಸ್ ಟ್ರೋಫಿ ಪಂದ್ಯ ವೀಕ್ಷಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಅಲ್ಲದೇ ಮೈಸೂರಿನಲ್ಲಿ ಅಭಿಮಾನಿಗಳು ದೇವ ಮೊರೆ ಹೋಗಿದ್ದು, ಅಗ್ರಹಾರದ 101 ಗಣಪತಿ ದೇವಾಲಯದಲ್ಲಿ 101 ಈಡುಗಾಯಿ ಹೊಡೆದು ಹರಕೆ ಪೂರೈಸಿದ್ದಾರೆ.
ಈ ವೇಳೆ ಅಭಿಮಾನಿಗಳು ಟೀಂ ಇಂಡಿಯಾ ಆಟಗಾರರ ಪೋಸ್ಟರ್ ಹಿಡಿದು ಘೋಷಣೆ ಕೂಗಿದ್ದು, ಟೀಂ ಇಂಡಿಯಾ ಆಟಗಾರರಿಗೆ ಶಕ್ತಿ ನೀಡುವಂತೆ ವಿಘ್ನ ನಿವಾರಕನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.